ಕೆಲವೊಮ್ಮೆ ಗ್ರಹಚಾರ ಕೆಟ್ಟರೆ ಏನು ಮಾಡಲಾಗದು… ಎಂಬ ಮಾತಿನಂತೆ ರೂಲ್ಸ್ ಫಾಲೋ ಮಾಡಿ ಎಂದು ಟ್ರಾಫಿಕ್ ಪೋಲೀಸರು ಗಲ್ಲಿ ಗಲ್ಲಿಗಳಲ್ಲಿ ನಿಂತು ದಂಡ ವಿಧಿಸಿದರೂ ಕೂಡ ಕ್ಯಾರೇ ಎನ್ನದೇ ಯಾರೆಷ್ಟೆ ಬುದ್ಧಿವಾದ ಹೇಳಿದರು ಕೂಡ ಗಾಳಿಗೆ ತೂರಿ ಬೇಕಾಬಿಟ್ಟಿ ವಾಹನಗಳನ್ನು ಚಲಾಯಿಸಿ ದುರಂತಗಳಿಗೆ ಆಹ್ವಾನ ಮಾಡಿಕೊಳ್ಳುವ ಪ್ರಸಂಗಗಳು ದಿನಂಪ್ರತಿ ವರದಿಯಾಗುತ್ತಲೇ ಇರುತ್ತವೆ.
ಅವಸರವೆ ಅಪಾಯಕ್ಕೆ ಕಾರಣ ಎಂಬಂತೆ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಯುವಕನೊಬ್ಬ ತನ್ನ ಸ್ನೇಹಿತೆಗೆ ಬರ್ತ್ಡೇ ಪಾರ್ಟಿ ಕೊಡಲು ಬೈಕ್ನಲ್ಲಿ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಅತಿಯಾದ ವೇಗದಲ್ಲಿ ಗಾಡಿ ಚಲಾಯಿಸಿದ್ದರಿಂದ ಈ ವೇಳೆ ವಿಧಿಯಾಟಕ್ಕೆ ಯುವತಿ ಬಲಿಯಾದರೆ, ಯುವಕ ಆಸ್ಪತ್ರೆಗೆ ದಾಖಲಾಗುವಂತಾಗಿದೆ.
ಬೆಂಗಳೂರಿನ ಆರ್.ಟಿ ನಗರ ನಿವಾಸಿಗಳಾದ ಸನಾ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದಳು. ಇನ್ನು ಜಿಶಾನ್ ತಂದೆಯ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಇಬ್ಬರು ಸ್ನೇಹಿತರಾಗಿದ್ದು, ಮಂಗಳವಾರ ಯಲಹಂಕ ಫ್ಲೈಓವರ್ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 18 ವರ್ಷದ ಸನಾ ಸಾಹಿಬಾ ಸಾವಿನ ದವಡೆಗೆ ಬಲಿಯಾಗಿದ್ದಾಳೆ.
ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಆರ್.ಟಿ ನಗರ ನಿವಾಸಿ 21 ವರ್ಷದ ಜಿಶಾನ್ ತನ್ನ ಸ್ನೇಹಿತೆ ಸನಾ ಸಾಹಿಬಾಳಿಗೆ ಪಾರ್ಟಿ ಕೊಡಿಸಲು ಬೈಕ್ನಲ್ಲಿ ಕರೆದುಕೊಂಡು ಹೋಗುತ್ತಿದ್ದ.
ಅತಿವೇಗದಲ್ಲಿದ್ದ ಜಿಶಾನ್ಗೆ ಬೈಕ್ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಆಗಿದ್ದು, ಈ ಸಂದರ್ಭ ಡಿಕ್ಕಿ ಹೊಡೆದ ರಭಸಕ್ಕೆ ಯುವಕನ ಕೈ ಕಟ್ ಆದರೆ, ತಲೆ ಮತ್ತು ಎದೆಗೆ ಬಲವಾದ ಪೆಟ್ಟಾಗಿದ್ದರಿಂದ ಯುವತಿ ಸ್ಥಳದಲ್ಲಿಯೇ ಸಾವನ್ನಪ್ಪಿ ಇಹಲೋಕಕ್ಕೆ ವಿದಾಯ ಹೇಳಿದ್ದಾಳೆ.
ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಇತ್ತ ಕೇಕ್ ಕಟ್ ಮಾಡಬೇಕಾದ ಜಿಶಾನ್ ಕೈ ಕಳೆದುಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ಕೊಡಿಗೆಹಳ್ಳಿ ಬಳಿಯ ಪ್ರೋಲೈಫ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ.
ಹುಟ್ಟುಹಬ್ಬ ಆಚರಣೆ ಮಾಡುವ ಸಂಭ್ರಮದಲ್ಲಿ ಕಾಲ ಕಳೆಯುವ ಹೊತ್ತಿಗೆ ಎರಡು ಮನೆಯಲ್ಲೂ ಕೂಡ ದುಃಖದ ಛಾಯೆ ಮಡುಗ್ಗಟ್ಟಿದೆ.
