ಮಧ್ಯಪ್ರದೇಶದ ದಾಮೋಹ್‌ನ ಜಬೇರಾದ ಬಿಜೆಪಿ ಶಾಸಕ ಧರ್ಮೇಂದ್ರ ಸಿಂಗ್ ಲೋಧಿ ಅವರು ತಮ್ಮ ವಿವಾದಾತ್ಮಕ ಹೇಳಿಕೆಯ ಮೂಲಕ ಗಮನ ಸೆಳೆದಿದ್ದಾರೆ. ತಮ್ಮ ಪ್ರದೇಶದ ರಸ್ತೆಯನ್ನು ತಮ್ಮದೇ ಪಕ್ಷದ ಹಿರಿಯ ಸಂಸದೆ ಹಾಗೂ ಖ್ಯಾತ ನಟಿ ಹೇಮಾ ಮಾಲಿನಿ ಹಾಗೂ ನಟಿ ಕತ್ರಿನಾ ಕೈಫ್ ಅವರ ಕೆನ್ನೆಗಳಿಗೆ ಹೋಲಿಸಿದ್ದಾರೆ. ಈ ವಿವಾದಾತ್ಮಕ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದೇ ವೇಳೆ ಧರ್ಮೇಂದ್ರ ಸಿಂಗ್ ಲೋಧಿ ಅವರ ಈ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ವಿರೋಧಿಸಿದೆ. ಇದು ಮಹಿಳೆಯರಿಗೆ ಮಾಡಿದ ಅವಮಾನ ಎಂದು ಕಾಂಗ್ರೆಸ್ ಲೋಧಿ ವಿರುದ್ಧ ಹರಿಹಾಯ್ದಿದೆ.
ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ಬಿಸಿ ಪ್ರಾರಂಭವಾಗಿದೆ. ಶಾಸಕ ಧರ್ಮೇಂದ್ರ ಸಿಂಗ್ ಲೋದಿ ಅವರು ವಿಕಾಸ ಯಾತ್ರೆ ವ್ಯಾಪ್ತಿಯ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ವ್ಯಾಪ್ತಿಯ ಹಳ್ಳಿಯೊಂದರ ರಸ್ತೆಗಳ ಸ್ಥಿತಿ ಹೇಗಿದೆ ಎಂದು ಜನರನ್ನು ಪ್ರಶ್ನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಿಎಂ ಶಿವರಾಜ್ ಸಿಂಗ್ ಚೌಹಾನ್ ಅನುಮೋದನೆ ನೀಡಿದ್ದಾಗಿ ಎಂದು ಹೇಳಿದ ಅವರು, ಇದು ಇನ್ನು ಮುಂದೆ ಹೇಮಮಾಲಿನಿ ಅವರ ಕೆನ್ನೆಯಂತೆ ರಸ್ತೆಗಳಂತೆ ನುಣುಪಾಗುತ್ತದೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ, ಲೋದಿ ಅವರು ತಮ್ಮ ಕಾರ್ಯಕರ್ತರೊಂದಿಗೆ ಮಾತನಾಡುತ್ತಾ, ಹೇಮಮಾಲಿನಿಗೆ ವಯಸ್ಸಾಯಿತು, ಹೊಸ ನಾಯಕಿಯ ಹೆಸರು ತಿಳಿಸಿ ಎಂದು ಕೇಳಿದಾಗ, ಕತ್ರಿನಾ ಕೈಫ್ ಹೆಸರನ್ನು ಅಲ್ಲಿ ನೆರೆದಿದ್ದವರು ಹೇಳಿದ್ದಾರೆ. ಆವಾಗ ಅವರು ಕತ್ರಿನಾ ಕೈಫ್ ಗೆ ಕೂಡಾ ವಯಸ್ಸಾಯಿತು ಎಂದು ಹೇಳುತ್ತಾ, ಬೇರೆ ಹೊಸ ಹಿರೋಯಿನ್ ಹೆಸರು ಹೇಳಿ ಎಂದು ಹೇಳುತ್ತಾ, ತಮ್ಮ ಜೊತೆಗಿದ್ದ ರಸ್ತೆ ವಿಭಾಗದ ಎಂಜಿನಿಯರ್‌ಗೆ ರಸ್ತೆ ನಿರ್ಮಾಣ ಯಾವಾಗ ಆರಂಭವಾಗುತ್ತದೆ ಎಂದು ಕೇಳಿ ಮಾತು ಬದಲಾಯಿಸಿದ್ದಾರೆ.
ಬಿಜೆಪಿ ಶಾಸಕನ ಈ ವಿವಾದಾತ್ಮಕ ಹೇಳಿಕೆಯ ವೀಡಿಯೋ ಇದೀಗ ವೈರಲ್ ಆಗಿದ್ದು, ಇದು ಮಹಿಳೆಯರಿಗೆ ಮಾಡಿದ ಅವಮಾನ ಎಂದು ಕಾಂಗ್ರೆಸ್ ಹೇಳಿದೆ. ತಮ್ಮ ಪಕ್ಷದ ಹಿರಿಯ ಸಂಸದರನ್ನು ಅವಮಾನಿಸಿದ ಲೋಧಿ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯಿಸಿದೆ. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹಾಗೂ ಬುಡಕಟ್ಟು ಜನಾಂಗದ ನಾಯಕಿ ರಜನಿ ಠಾಕೂರ್ ಹೇಳಿಕೆ ನೀಡಿ, ಖ್ಯಾತ ನಟಿ ಹಾಗೂ ಸಂಸದೆಯೊಬ್ಬರಿಗೆ ಅವಮಾನ ಮಾಡಲಾಗಿದೆ, ಇಂತಹ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಮಹಿಳಾ ಸ್ನೇಹಿ ಯೋಜನೆಗಳಿಗೆ ಅರ್ಥವಿಲ್ಲ. ಮುಖ್ಯಮಂತ್ರಿಗಳು ಕೂಡಲೇ ಇಂತಹ ಶಾಸಕರಿಂದ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯ ಮಾಡಿದೆ.
