Home » Telangana: ತರಗತಿಯಲ್ಲಿ ನಿದ್ದೆಗೆ ಜಾರಿದ ಬಾಲಕ; ಶಾಲೆಗೆ ಬೀಗ ಹಾಕಿ ಹೋದ ಶಿಕ್ಷಕ

Telangana: ತರಗತಿಯಲ್ಲಿ ನಿದ್ದೆಗೆ ಜಾರಿದ ಬಾಲಕ; ಶಾಲೆಗೆ ಬೀಗ ಹಾಕಿ ಹೋದ ಶಿಕ್ಷಕ

0 comments

Telangana: ತರಗತಿಯಲ್ಲಿ ನಿದ್ದೆಗೆ ಜಾರಿದ ವಿದ್ಯಾರ್ಥಿಯೊಬ್ಬನನ್ನು ಮರೆತ ಶಾಲೆಯ ಶಿಕ್ಷಕರೋರ್ವರು ಶಾಲೆಗೆ ಬೀಗ ಹಾಕಿ ಮನೆಗೆ ತೆರಳಿರುವ ಘಟನೆಯೊಂದು ತೆಲಂಗಾಣದ ನಾಗರ್‌ ಕರ್ನೂಲ್‌ ಜಿಲ್ಲೆಯ ಲಿಂಗಾಲದಲ್ಲಿ ನಡೆದಿದೆ. ಸ್ಥಳೀಯರು ಶಾಲೆಯ ಶಿಕ್ಷಕರ ನಡೆಗೆ ಭಾರೀ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಪ್ರಕರಣವೇನು?

ನಾಗರ ಕರ್ನೂಲ್‌ ಜಿಲ್ಲೆಯ ಲಿಂಗಾಲ ಮಂಡಲದ ಸೈನ್‌ ಪೇಟಾ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಒಂದನೇ ತರಗತಿಯ ವಿದ್ಯಾರ್ಥಿ ಶರತ್‌ ಗುರುವಾರ ಸಂಜೆ ತರಗತಿಯಲ್ಲಿಯೇ ನಿದ್ದೆಗೆ ಜಾರಿದ್ದು, ಎಲ್ಲಾ ವಿದ್ಯಾರ್ಥಿಗಳು ಮನೆಗೆ ತೆರಳಿದ ನಂತರ, ಕೊನೆಗೆ ಶಾಲೆಯ ಶಿಕ್ಷಕ ತರಗತಿಯ ಕೊಠಡಿಗಳಿಗೆ ಬೀಗ ಹಾಕಿ ಮನೆಗೆ ಹೋಗಿದ್ದಾರೆ. 3.30 ಕ್ಕೆ ದಿನಾಲೂ ಮನೆಗೆ ಬರುತ್ತಿದ್ದ ಬಾಲಕ ಅಂದು 4 ಗಂಟೆಯಾದರೂ ಬರದೇ ಇರುವುದನ್ನು ಕಂಡು ಬಾಲಕನ ತಂದೆ ಮಲ್ಲೇಶ್‌ ಬಾಲಕನನ್ನು ಹುಡುಕಲು ತೆರಳಿದ್ದಾರೆ. ಆದರೆ ಆತ ಎಲ್ಲೂ ಪತ್ತೆಯಾಗಿಲ್ಲ. ಕೊನೆಗೆ ಬಾಲಕನ ತರಗತಿಯ ಕಿಟಕಿಯ ಬಾಗಿಲು ತೆರೆದು ನೋಡಿದಾಗ ಮಗು ಒಳಗಡೆ ಇರುವುದು ಕಂಡು ಬಂದಿದೆ. ಅಲ್ಲೇ ಇದ್ದ ಒಂದು ಕಲ್ಲಿನಿಂದ ಕೊಠಡಿಯ ಬೀಗ ಮುರಿದು ಮಗನನ್ನು ಹೊರಗೆ ತಂದಿದ್ದಾರೆ.

ತರಗತಿಯನ್ನು ಸರಿಯಾಗಿ ಪರಿಶೀಲನೆ ಮಾಡದ ಶಿಕ್ಷಕರು ಬೀಗ ಹಾಕಿರುವ ನಡೆಗೆ ಸ್ಥಳೀಯರು ಶಾಲಾ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂತರ ಸ್ಥಳೀಯರ ಜೊತೆ ಮಾತುಕತೆ ಮಾಡಿದ ಶಾಲಾ ಶಿಕ್ಷಕರು ಮುಂದಿನ ದಿನಗಳಲ್ಲಿ ಇಂತಹ ಘಟನೆ ಆಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

You may also like