Kerala: ದೇವಾಲಯಕ್ಕೆ ಶರ್ಟ್ ತೆಗೆದು ಪ್ರವೇಶಿಸುವುದನ್ನು ಇತ್ತೀಚಿಗೆ ಕೇರಳ ಸರ್ಕಾರ ಪ್ರಶ್ನಿಸಿತ್ತು. ಮುಂದಿನ ದಿನಗಳಲ್ಲಿ ಈ ಪದ್ಧತಿಯನ್ನು ತೆಗೆದುಹಾಕಲಾಗುವುದು ಎಂದು ಕೂಡ ತಿಳಿದಿತ್ತು. ಈ ಕುರಿತಾಗಿ ದೇಶಾದ್ಯಂತ ಭಾರಿ ಪರ ವಿರೋಧ ಚರ್ಚೆಗಳು ಹುಟ್ಟಿಕೊಂಡಿದ್ದವು. ಕೊನೆಗೆ ಈ ವಿಚಾರ ಹಾಗೆಯೇ ತಣ್ಣಗಾಗಿ ಬಿಟ್ಟಿತು. ಆದರೆ ಈಗ ಅಚ್ಚರಿ ಎಂಬಂತೆ ಕೇರಳದಲ್ಲಿಯೇ ಶರ್ಟ್ ತೆಗೆಯದೆ ಭಕ್ತರು ದೇವಾಲಯ ಪ್ರವೇಶಿಸಿ ಸಂಪ್ರದಾಯಕ್ಕೆ ಸೆಡ್ಡು ಹೊಡೆದಿದ್ದಾರೆ.
ಹೌದು, ಕೇರಳದ ಪತ್ತನಂತಿಟ್ಟ ಜಿಲ್ಲೆಯ ಪೆರುನಾಡಿನ ಅಯ್ಯಪ್ಪ ದೇವಸ್ಥಾನದಲ್ಲಿ ಭಕ್ತರು ಭಾನುವಾರದಂದು ಅಂಗಿ ತೆಗೆಯದೆ ಪ್ರವೇಶಿಸಿ, ದೀರ್ಘಕಾಲದ ಸಂಪ್ರದಾಯಕ್ಕೆ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಈ ಪ್ರತಿಭಟನೆಯಲ್ಲಿ, SNDP ಸಂಯುಕ್ತ ಸಮರ ಸಮಿತಿಯ ಸದಸ್ಯರು ಅಂಗಿ ತೆಗೆಯದೆ ಸರತಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿದರು.
ಅಂದಹಾಗೆ ಟ್ರಾವಂಕೂರ್ ದೇವಸ್ವಂ ಮಂಡಳಿ (TDB) ನಿರ್ವಹಿಸುವ ಈ ದೇವಸ್ಥಾನದಲ್ಲಿ, ಪುರುಷ ಭಕ್ತರು ಅಂಗಿ ತೆಗೆದು ಪ್ರವೇಶಿಸುವುದು ಸಂಪ್ರದಾಯವಾಗಿತ್ತು. ಈ ಸಂಪ್ರದಾಯಕ್ಕೆ ವಿರೋಧ ವ್ಯಕ್ತಪಡಿಸಿ ಭಕ್ತರು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದಾರೆ. ಈ ಪ್ರತಿಭಟನೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ. ಪೋಲೀಸರು ಅಥವಾ ದೇವಸ್ಥಾನದ ಆಡಳಿತ ಮಂಡಳಿ ಯಾವುದೇ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಪ್ರತಿಭಟನಾಕಾರರು, ಭಕ್ತರು ಅಂಗಿ ತೆಗೆಯುವ ಸಂಪ್ರದಾಯವನ್ನು ಶಾಶ್ವತವಾಗಿ ರದ್ದುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
