Tesla: ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಕಾರು ಭಾರತದಲ್ಲಿ ಬಿಡುಗಡೆಯಾಗಲು ತಯಾರಿ ನಡೆಸುತ್ತಿರುವ ನಡುವೆಯೇ ಭಾರತದ ಉದ್ಯಮಿಯೊಬ್ಬರು ಈ ಟೆಸ್ಲಾ ಕಾರನ್ನು ಖರೀದಿಸಿದ್ದಾರೆ. ಈ ಮೂಲಕ ಭಾರತದಲ್ಲಿ ಮೊದಲು ಟೆಸ್ಲಾ ಕಾರು ಖರೀದಿಸಿದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.
ಹೌದು, ಸೂರತ್ ನ ಗೋಪಿನ್ ಡೆವಲಪರ್ಸ್ ಸಂಸ್ಥಾಪಕ ಸೂರತ್ ಮೂಲದ ಉದ್ಯಮಿ ಲವಜಿ ದಲಿಯಾ ಎಂಬುವವರು ಟೆಸ್ಲಾ ಸೈಬರ್ ಟ್ರಕ್ ಅನ್ನು ಖರೀದಿ ಮಾಡಿದ್ದಾರೆ. ಸುಮಾರು 51 ಲಕ್ಷ ಮೌಲ್ಯದ ಸೈಬರ್ ಟ್ರಕ್ ಅನ್ನು ವಿಶೇಷವಾಗಿ ದುಬೈನಿಂದ ಆಮದು ಮಾಡಿಕೊಳ್ಳಲಾಗಿದ್ದು, ಈಗ ಸೂರತ್ ತಲುಪಿದೆ. ಸದ್ಯ ಸೂರತ್ ನಲ್ಲಿ ಟೆಸ್ಲಾ ಟ್ರಕ್ ಓಡಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಇನ್ನು ಉದ್ಯಮಿ ಲವಜಿ ದಲಿಯಾ ಅವರಿಗೆ ಐಷಾರಾಮಿ ಕಾರುಗಳ ಮೇಲೆ ಅತೀವ ಮೋಹ, ಹೀಗಾಗಿ ಸೈಬರ್ ಟ್ರಕ್ ಅನ್ನು ಕೂಡ ಖರೀದಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಲವಜಿ ಅವರ ಮಗ ಪಿಯೂಷ್ ಅವರು, ನಾವು ಆರು ತಿಂಗಳ ಹಿಂದೆ ಅಮೆರಿಕದಲ್ಲಿ ಅದನ್ನು ಬುಕ್ ಮಾಡಿದ್ದೇವೆ. ಕೆಲವು ದಿನಗಳ ಹಿಂದೆ ನಮಗೆ ವಿತರಣೆ ಸಿಕ್ಕಿತು ಎಂದಿದ್ದಾರೆ
