CM Siddaramaiah: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧಾರವಾಡದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಭರಮನಿ ಅವರನ್ನು ಹೊಡೆಯಲು ಕೈ ಎತ್ತಿದ ಘಟನೆಗೆ ಸಂಬಂಧಿಸಿದಂತೆ ಆರ್ಷ.ಟಿ.ಐ ಕಾರ್ಯಕರ್ತ ದೂರು ನೀಡಿದ್ದಾರೆ. ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣೆ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಭೀಮಪ್ಪ ಗಡಾದ ಗುರುವಾರ ದೂರು ನೀಡಿದರು. ಏಪ್ರಿಲ್ 28ರಂದು ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದ ವೇಳೆ ಸಿಎಂ ಪೊಲೀಸ್ ಅಧಿಕಾರಿ ಮೇಲೆ ಕೈ ಎತ್ತಿದ್ದರು.
ಏ.28ರಂದು ನಗರದಲ್ಲಿ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರೋಧಿಸಿ ಕಾಂಗ್ರೆಸ್ ಸಮಾವೇಶ ನಡೆಸಿತ್ತು. ಧಾರವಾಡದ ಎಎಸ್ಪಿ ನಾರಾಯಣ ಭರಮನಿ ನೇತೃತ್ವದಲ್ಲಿ ಭದ್ರತೆಗಾಗಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಾತನಾಡುತ್ತಿದ್ದಾಗ, ಬಿಜೆಪಿ ಕಾರ್ಯಕರ್ತೆಯರು ನುಗ್ಗಿ ಪ್ರತಿಭಟಿಸಿ, ಗದ್ದಲ ಎಬ್ಬಿಸಿದ್ದರು. ಇದರಿಂದ ಕುಪಿತಗೊಂಡು ಸಿ.ಎಂ ಸಿದ್ದರಾಮಯ್ಯ ಅಲ್ಲೇ ಇದ್ದ ಎಎಸ್ಪಿ ನಾರಾಯಣ ಭರಮನಿ ಅವರ ಮೇಲೆ ಹೊಡೆಯಲು ಮುಂದಾಗಿದ್ದರು.
‘ಮುಖ್ಯಮಂತ್ರಿಯಾಗಿದ್ದುಕೊಂಡು ಜವಾಬ್ದಾರಿಯುತ ವ್ಯಕ್ತಿಯಾಗಿ ನಾಡಿನ ಸಮಸ್ತ ಚಿಂತನೆ- ಮಂಥನೆಗಳಿಗೆ ಧ್ವನಿಯಾಗುವುದರ ಮೂಲಕ ಕಾರ್ಯಾಂಗದ ಅಧಿಕಾರಿಗಳನ್ನು ಉತ್ತೇಜಿಸುವುದನ್ನು ಮರೆತು, ಕರ್ತವ್ಯ ನಿರತ ಅಧಿಕಾರಿಗೆ ಕೀಳು ಪದಗಳನ್ನು ಬಳಕೆ ಮಾಡಿದ್ದಲ್ಲದೇ ಗದರಿಸುವ ಧ್ವನಿಯಲ್ಲಿ ‘ಪೋಲಿಸ್ ಸಮವಸ್ತ್ರದ ಮೇಲಿರುವ ಅವರನ್ನು ಹೊಡೆಯಲು ಹೋಗಿ ಅವರ ಆತ್ಮಸ್ಥೆರ್ಯವನ್ನು ಕುಗ್ಗಿಸುವಂಥ ಕೆಲಸ ಮಾಡಿದ್ದಾರೆ. ಶಾಸಕಾಂಗದ ಮುಖ್ಯಸ್ಥರಾಗಿರುವ ಸಿದ್ದರಾಮಯ್ಯ ಅವರ ಈ ನಡೆಯು ಸಂಪೂರ್ಣವಾಗಿ ಸಂವಿಧಾನದ ಆಶಯಕ್ಕೆ ವಿರೋಧವಾಗಿದೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
