Home » Caste Survey: ಮೊದಲ ದಿನ ಇದ್ದದ್ದು 20 ಲಕ್ಷ ಟಾರ್ಗೆಟ್, ನಡೆದದ್ದು ಕೇವಲ 10,000 ಜನರ ಸಮೀಕ್ಷೆ – ಆಗಿದ್ದೇನು?

Caste Survey: ಮೊದಲ ದಿನ ಇದ್ದದ್ದು 20 ಲಕ್ಷ ಟಾರ್ಗೆಟ್, ನಡೆದದ್ದು ಕೇವಲ 10,000 ಜನರ ಸಮೀಕ್ಷೆ – ಆಗಿದ್ದೇನು?

0 comments

Caste Survey : ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಪ್ರತಿ ಕುಟುಂಬದ ಸಮಗ್ರ ಚಿತ್ರಣವನ್ನು ಪಡೆಯುವ ಗುರಿಯನ್ನು ಹೊಂದಿದ್ದು ಈ “ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಸಮೀಕ್ಷೆ” ನಡೆಸುತ್ತಿದೆ. ಮೊದಲ ದಿನ ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಜಾತಿ ಗಣತಿಗೆ ಚಾಲನೆ ನೀಡಲಾಗಿದೆ. ಮೊದಲ ದಿನದಾಂತ್ಯಕ್ಕೆ ನಿರೀಕ್ಷಿತ 20 ಲಕ್ಷ ಜನರ ಬದಲು 2765 ಕುಟುಂಬಗಳ ಕೇವಲ 10,642 ಮಂದಿಯ ಸಮೀಕ್ಷೆ ಮಾತ್ರ ನಡೆಸಲಾಗಿದೆ.

ಹೌದು, ಇಂಟರ್ನೆಟ್‌ ಇಲ್ಲದ ಕಡೆ ಸಮೀಕ್ಷೆಗೆ ಬಳಸುವ ಆಯಪ್‌ ಕೆಲಸ ಮಾಡದೇ ಇರುವುದು, ಮೊದಲ ದಿನ ಗಣತಿದಾರರಿಗೆ ಸೂಕ್ತ ರೀತಿಯಲ್ಲಿ ಕಿಟ್‌ ವಿತರಣೆ ಆಗದ್ದು, ಕೆಲವು ಕಡೆ ಕಿಟ್‌ಗಳು ಸಂಜೆ ವೇಳೆಗೆ ಕೈ ಸೇರಿದ್ದು, ಇನ್ನು ಕೆಲವರಿಗೆ ಕಿಟ್‌ಗಳು ದೊರೆತರೂ ಮೊಬೈಲ್ ನೆಟ್‌ವರ್ಕ್ ಕೈಕೊಟ್ಟಿದ್ದು, ಇವೆರಡೂ ಇದ್ದರೂ, ಗಣತಿದಾರರಿಗೇ ಆ ಆಯಪ್ ಬಗ್ಗೆ ಅಪೂರ್ಣ ಮಾಹಿತಿ ಇರುವುದು ಸೇರಿದಂತೆ ಹಲವು ಕಾರಣಗಳಿಂದ ಗಣತಿಗೆ ಅಡ್ಡಿಯಾಗಿದೆ ಎನ್ನಲಾಗಿದೆ.

ಅಂದಹಾಗೆ ರಾಜ್ಯಾದ್ಯಂತ ಸೋಮವಾರ ಸಮೀಕ್ಷೆಗೆ ಚಾಲನೆ ದೊರಕಿದ್ದು, 2765 ಮನೆಗಳಿಗೆ ಸಮೀಕ್ಷಕರು ಭೇಟಿ ನೀಡಿ ದತ್ತಾಂಶ ಸಂಗ್ರಹಿಸಿದ್ದಾರೆ. ಮೊದಲ ದಿನ ಸಮೀಕ್ಷಾ ಆ್ಯಪ್‌ಗೆ ‘ಒಟಿಪಿ’ ಪಡೆಯುವ ಸ್ವಲ್ಪ ಅಡಚಣೆ ಉಂಟಾಗಿತ್ತು. ಈ ವಿಚಾರವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಡಿಯಲ್ಲಿನ ‘ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯ’ದ (ಇಡಿಸಿಎಸ್‌) ಗಮನಕ್ಕೆ ತರಲಾಗಿದ್ದು, ಸೇವಾದಾರ ಬಿಎಸ್‌ಎನ್‌ಎಲ್‌ ಸಂಸ್ಥೆಯಿಂದ ಸೂಕ್ತ ಕ್ರಮ ವಹಿಸಲು ಸೂಚಿಸುವಂತೆ ಕೋರಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಿಟ್‌ ತಲುಪದೆ ಸಮೀಕ್ಷೆಗೆ ವಿಘ್ನ:
ಆನ್ಲೈನ್‌ ಸಮೀಕ್ಷೆಯಾಗಿರುವುದರಿಂದ ಕಿಟ್ ಅಗತ್ಯವೇನಿಲ್ಲ ಎಂದು ಹೇಳಬಹುದು. ಆದರೆ, ಪ್ರತಿ ಮನೆಯ ಸಮೀಕ್ಷೆ ಮುಗಿದ ನಂತರ ಬರೆಸಿಕೊಳ್ಳುವ ಸ್ವಯಂ ದೃಢೀಕರಣಪತ್ರ, ಗುರುತಿನಚೀಟಿಗೆ ಇದು ಅಗತ್ಯ. ಅನೇಕರಿಗೆ ಸಂಜೆ 7 ಗಂಟೆಯಾದರೂ ಕಿಟ್‌ ತಲುಪಿಲ್ಲ ಎನ್ನಲಾಗಿದೆ. ಇನ್ನು ಹರಸಾಹಸ ಪಟ್ಟು ಆಯಪ್ ಡೌನ್‌ ಲೋಡ್ ಮಾಡಿದರೆ ಲಾಗ್‌ಇನ್ ಆಗಲು ಒಟಿಪಿ ಸಿಗುತ್ತಿರಲಿಲ್ಲ. ಕೆಲ ಕಡೆ ಗಣತಿದಾರರ ಮೊಬೈಲ್‌ ಕೈ ಕೊಡುವುದು, ಆಯಪ್‌ ಗೆ ಅಗತ್ಯ ಸ್ಟೋರೇಜ್‌ ಇಲ್ಲದಿರುವುದು ಸೇರಿ ಹಲವು ತಾಂತ್ರಿಕ ಕಾರಣಗಳಿಂದ ಮೊದಲ ದಿನ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

You may also like