Davnegere: ಇಂದಿನ ಕೆಲವು ವಿದ್ಯಮಾನಗಳನ್ನು ಗಮನಿಸಿದಾಗ ಅಯ್ಯೋ ಕಲಿಯುಗದಲ್ಲಿ ಇನ್ನು ಏನೇನು ನೋಡಬೇಕೋ ಏನೋ ಎಂದು ಅನಿಸುವುದುಂಟು. ಅದೇ ರೀತಿಯ ಆಶ್ಚರ್ಯಕಾರಿ ಘಟನೆಯೊಂದು ದಾವಣಗೆರೆಯಲ್ಲಿ (Davangere) ನಡೆದಿದೆ.
ಹೌದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಕೋಳಿಯೊಂದು ನೀಲಿ ಮೊಟ್ಟೆಯಿಟ್ಟು ಜನರ ಹುಬ್ಬೇರುವಂತೆ ಮಾಡಿದೆ. ಈ ಘಟನೆ ಗ್ರಾಮದ ಜನರಲ್ಲಿ ಅಚ್ಚರಿ ಮೂಡಿಸಿದೆ. ಸೈಯದ್ ನೂರ್ ಎಂಬಾತ ಸುಮಾರು ಹತ್ತು ನಾಟಿ ಕೋಳಿಗಳನ್ನು ಸಾಕಿದ್ದು, ಹೀಗೆ ಮೊಟ್ಟೆಗಳನ್ನು ಮಾರಾಟ ಮಾಡುತ್ತಿದ್ದರು. ಆದ್ರೆ ಸಹಜವಾಗಿ ಬಿಳಿ ಮೊಟ್ಟೆಗಳನ್ನು ಇಡುತ್ತಿದ್ದ ನಾಟಿ ಕೋಳಿಯೊಂದು ಈ ಬಾರಿ ನೀಲಿ ಮೊಟ್ಟೆ ಇಟ್ಟಿದೆ.
ಕಳೆದ ಎರಡು ವರ್ಷಗಳಿಂದ ಸಯ್ಯದ್ ನೂರ್ ಉಪಕಸುಬಾಗಿ ನಾಟಿ ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ. ಸುಮಾರು ಹತ್ತು ನಾಟಿ ಕೋಳಿಗಳನ್ನು ಸಯ್ಯದ್ ನೂರ್ ಸಾಕಿದ್ದಾರೆ. ನೀಲಿ ಮೊಟ್ಟೆಯ ಕಥೆ ಕೇಳಿ ನೀಲಿ ಮೊಟ್ಟೆ ನೋಡಲು ಗ್ರಾಮದ ಜನ ಆಗಮಿಸುತ್ತಿದ್ದಾರೆ. ಜನರು ಬಂದು ನೀಲಿ ಮೊಟ್ಟೆ ಹಿಡಿದುಕೊಂಡು ಸೆಲ್ಪಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.
ಇದನ್ನು ಕಂಡ ಕೂಡಲೇ ಈ ವ್ಯಕ್ತಿ ಪಶುಸಂಗೋಪನೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ನೀಲಿ ಮೊಟ್ಟೆಗಳನ್ನು ಕಂಡ ಅಧಿಕಾರಿಗಳೂ ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನು ಈ ರೀತಿ ಮೊಟ್ಟೆ ನೀಲಿ ಇರುವದಕ್ಕೆ ಕಾರಣವೇನು ಎಂಬುದರ ಕುರಿತು ಅಧಿಕಾರಿಗಳು ಪರೀಕ್ಷೆ ನಡೆಸಿದ್ದಾರೆ. ಮೆದೊಜೀರಕಾಂಗದಲ್ಲಿ ಬಿಲಿವರ್ಡಿನ್ ಎಂಬ ವರ್ಣ ದ್ರವ್ಯದ ಕಾರಣಕ್ಕೆ ನೀಲಿ ಬಣ್ಣ ಬಂದಿರುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದ್ರೆ ಈ ಮೊಟ್ಟೆಯ ಮೇಲ್ಬಾಗ ಮಾತ್ರ ನೀಲಿ ಬಣ್ಣ ಇದ್ದು, ಉಳಿದಂತೆ ಮೊಟ್ಟೆ ಮಾಮೂಲಾಗಿ ಇದೆ.
ಈ ರೀತಿ ಯಾವಾಗಲೂ ಕೋಳಿಗಳು ನೀಲಿ ಬಣ್ಣದ ಮೊಟ್ಟೆಯನ್ನು ಹಾಕಲ್ಲ. ಪಿಗ್ಮೆಂಟ್ ಕಾರಣದಿಂದ ಅಪರೂಪಕ್ಕೆ ಈ ಬಣ್ಣದ ಮೊಟ್ಟೆಗಳು ಬರುತ್ತದೆ. ಜೆನಿಟಿಕ್ ಸಹ ಇದಕ್ಕೆ ಕಾರಣವಾಗುತ್ತದೆ. ಇದರಿಂದ ಯಾವುದೇ ಆತಂಕಕ್ಕೆ ಒಳಗಾಗೋದು ಬೇಡ ಎಂದು ಡಾ.ರಘುನಾಯ್ಕ್ ಮಾಹಿತಿ ನೀಡಿದ್ದಾರೆ.
