China: ತಲೆನೋವು, ತಲೆ ಸುತ್ತು, ವಾಕರಿಕೆ, ಹೊಟ್ಟೆ ನೋವು ಇಂತಹ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಡಿದರೆ ಮಹಿಳೆಯರು ಮನೆಯಲ್ಲಿಯೇ ಮನೆಮದ್ದು ಮಾಡಿಕೊಂಡು ಅದನ್ನು ನಿವಾರಿಸಿಕೊಂಡು ಬಿಡುತ್ತಾರೆ. ಅಂತೆಯೇ ಇನ್ನೊಬ್ಬಳು ಮಹಿಳೆ ತಲೆನೋವು ಕಾಡಿಸಿಕೊಂಡಿದ್ದಕ್ಕೆ ತಾನೆ ಮನೆ ಮದ್ದು ಮಾಡಿಕೊಂಡು ಪಜೀತಿಗೆ ಸಿಕ್ಕಿ ಹಾಕಿಕೊಂಡಿದ್ದಾಳೆ.
ಹೌದು, ತಲೆನೋವಿನಿಂದ (Headache) ಬಳಲುತ್ತಿದ್ದ ಪೂರ್ವ ಚೀನಾದ ಜಿಯಾಂಗ್ಸು ಪ್ರಾಂತ್ಯದ ನಿವಾಸಿಯಾಗಿರುವ 50 ವರ್ಷದ ಲಿಯು ಎಂಬ ಮಹಿಳೆಯೊಬ್ಬಳು ಮನೆಯಲ್ಲಿಯೇ ತಲೆ ನೋವು ನಿವಾರಿಸಿಕೊಳ್ಳಲು ಹಸಿ ಮೀನಿನ ಪಿತ್ತಕೋಶ (raw fish gallbladder) ತಿಂದ್ರೆ ತಲೆ ನೋವು ಕಮ್ಮಿ ಆಗುತ್ತೆ ಎಂದು ನಂಬಿ ಇಡೀ ಹಸಿ ಮೀನನ್ನು ಸೇವಿಸಿ ಪಡಬಾರದ ಕಷ್ಟ ಪಟ್ಟಿದ್ದಾರೆ.
ಲಿಯು, ತಲೆನೋವಿನಿಂದ ಬಳಲುತ್ತಿದ್ದರು. ಹಸಿ ಮೀನು ತಿನ್ನುವುದರಿಂದ ತಲೆನೋವು ನಿವಾರಣೆಯಾಗುತ್ತದೆ ಎಂದು ಅವರು ಅನೇಕ ಜನರಿಂದ ಕೇಳಿದ್ದರು. ಆದ್ದರಿಂದ, ಕಳೆದ ಡಿಸೆಂಬರ್ 14ರ ಬೆಳಿಗ್ಗೆ, ಮಾರುಕಟ್ಟೆಗೆ ಹೋಗಿ 2.5 ಕೆಜಿ ಮೀನನ್ನು ಖರೀದಿಸಿದ್ದಾರೆ. ಬಳಿಕ ಮೀನನ್ನು ಬೇಯಿಸದೆ ಹಸಿ ಮೀನಿನ ಪಿತ್ತಕೋಶವನ್ನೇ ನುಂಗಿದ್ದಾರೆ. ಹಸಿ ಮೀನಿನ ಪಿತ್ತಕೋಶವನ್ನು ತಿಂದ ಮಹಿಳೆಗೆ ಎರಡು ಗಂಟೆಗಳ ನಂತರ, ವಾಂತಿ, ಅತಿಸಾರ ಮತ್ತು ಹೊಟ್ಟೆ ನೋವು ಶುರುವಾಗಿದೆ. ನೋವು ಜೋರಾಗುತ್ತಿದ್ದಂತೆ ಆಕೆಯ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ತಕ್ಷಣ ವೈದ್ಯರು ಆಕೆಯನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆಕೆಯ ಯಕೃತ್ತಿನಲ್ಲಿ ಮೀನಿನ ಪಿತ್ತಕೋಶದ ವಿಷ ಇರುವುದು ಪತ್ತೆಯಾಗಿದ್ದು, ಐಸಿಯುಗೆ ದಾಖಲಿಸಿ ಪ್ಲಾಸ್ಮಾ ವಿನಿಮಯ ಚಿಕಿತ್ಸೆ ಮತ್ತು ಮೂತ್ರಪಿಂಡ ಚಿಕಿತ್ಸೆಯನ್ನು ನೀಡಿದ್ದಾರೆ. ಬಳಿಕ ಐದು ದಿನಗಳ ನಂತರ, ಆಕೆಯ ಸ್ಥಿತಿ ಸಹಜ ಸ್ಥಿತಿಗೆ ಮರಳಿದ್ದು, ಆಕೆಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
