ಕೊಪ್ಪಳ: ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರ ಗಂಗಾವತಿಯಲ್ಲಿ ವೃತ್ತವೊಂದಕ್ಕೆ ಹೆಸರು ಬದಲಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕೋಮುಗಳ ಯುವಕರ ನಡುವೆ ಮಾತಿನ ಚಕಮಕಿಯಾಗಿ ಘರ್ಷಣೆಯ ಪರಿಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ 144ನೇ ವಿಧಿಯ ಅನ್ವಯ ನಿಷೇಧಾಜ್ಞೆ ಜಾರಿ ಮಾಡಿ ಗಂಗಾವತಿ ತಹಶೀಲ್ದಾರ್ ನಾಗರಾಜ್ ಆದೇಶ ಹೊರಡಿಸಿದ್ದಾರೆ. ತಮಿಳುನಾಡಿನ ಕುನೂರಿನಲ್ಲಿ ಇತ್ತೀಚೆಗೆ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದ ಸಶಸ್ತ್ರ ಪಡೆಗಳ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಅವರ ಹೆಸರನ್ನು ವೃತ್ತವೊಂದಕ್ಕೆ ಇರಿಸಲು ಕೆಲ ಯುವಕರು ಮುಂದಾಗಿದ್ದರು. ಆದರೆ ಮತ್ತೊಂದು ಗುಂಪಿನ ಯುವಕರು ಈ ಪ್ರಯತ್ನವನ್ನು ವಿರೋಧಿಸಿದ್ದರಿಂದ ಮಾತಿಗೆ ಮಾತು ಬೆಳೆದು ಉದ್ವಿಗ್ನ ಪರಿಸ್ಥಿತಿ ತಲೆದೋರಿತ್ತು.
ಇಸ್ಲಾಂಪುರ ಸರ್ಕಲ್ನ ಹೆಸರು ಬದಲಿಸಬೇಕು ಎಂದು ಒಂದು ಗುಂಪು, ಬದಲಿಸಲು ಅವಕಾಶ ನೀಡುವುದಿಲ್ಲ ಎಂದು ಮತ್ತೊಂದು ಗುಂಪು ವಾಗ್ವಾದಕ್ಕೆ ಮುಂದಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಮನಗಂಡ ತಹಶೀಲ್ದಾರ್ ನಾಲ್ಕು ಜನರಿಗಿಂತ ಹೆಚ್ಚು ಮಂದಿ ಒಂದೆಡೆ ಗುಂಪು ಸೇರುವುದನ್ನು ನಿಷೇಧಿಸಿ ಆದೇಶ ಹೊರಡಿಸಿದರು. ಎರಡು ಕೋಮಿನ ನಡುವೆ ಮಾತಿನ ಚಕಮಕಿ ಉಂಟಾದ ಹಿನ್ನಲೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಇದೇ ವಿಚಾರವಾಗಿ ಕಾನೂನಿಗೆ ಭಂಗ ತರುವ ಯತ್ನಗಳು ನಡೆದಿರುವ ಕಾರಣ ನಗರ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಇಸ್ಲಾಂಪುರ ವೃತ್ತದಿಂದ 200 ಮೀಟರ್ ಸುತ್ತಮುತ್ತ ನಾಲ್ಕು ದಿನಗಳ ಕಾಲ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಆದೇಶವು ತಿಳಿಸಿದೆ. ಪೊಲೀಸರು ಮತ್ತು ಇತರ ಅಧಿಕಾರಿಗಳೊಂದಿಗೆ ಒಂದು ಗುಂಪು ವಾಗ್ವಾದಕ್ಕಿಳಿದ ಕಾರಣ ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಸಿಡಿಎಸ್ ಬಿಪಿನ್ ರಾವತ್ ಸರ್ಕಲ್ ಉದ್ಘಾಟಿಸಿದ್ದರು. ಸರ್ಕಲ್ ತೆರವುಗೊಳಿಸುವಂತೆ ಅನ್ಯಕೋಮಿನ ಮುಖಂಡರು ಆಗ್ರಹಿಸಿ, ಪೊಲೀಸರು ಮತ್ತು ಇತರ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ಕಾಂಗ್ರೆಸ್ ಮುಖಂಡ, ನಗರಸಭೆ ಸದಸ್ಯ ಶ್ಯಾಮೀದ್ ಮನಿಯಾರ್ ಸಹ ವಿರೋಧಿಸುವ ಗುಂಪಿನಲ್ಲಿದ್ದರು. ಈ ಸ್ಥಳಕ್ಕೆ ಈ ಹಿಂದೆ ಇಸ್ಲಾಂಪುರ ಎಂಬ ಹೆಸರನ್ನು ನಾಮಕರಣ ಮಾಡಲಾಗಿತ್ತು. ಇದೀಗ ಇಸ್ಲಾಂಪುರ ಹೆಸರು ತೆಗೆದು ಬಿಪಿನ್ ರಾವತ್ ಹೆಸರು ಹಾಕಿದ್ದಾರೆ ಎಂದು ವಾದಿಸಿದರು. ‘ಇವರಿಗೆ ಸೈನಿಕರ ಬಗ್ಗೆ ಇವರಿಗೆ ಗೌರವ ಇಲ್ಲ’ ಎಂಬು ಬಿಜೆಪಿ ಮುಖಂಡರು ಆರೋಪ ಮಾಡಿದರು.
