Ballary : ಗಣಿ ನಾಡು ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು ಗುಂಡಿನ ದಾಳಿಗೆ ಒಬ್ಬ ಕಾರ್ಯಕರ್ತ ಸಾವಿಗೀಡಾಗಿದ್ದಾನೆ.
ಹೌದು, ಬಳ್ಳಾರಿಯಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಅಂಗವಾಗಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹಾಗೂ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಬೆಂಬಲಿಗರ ನಡುವೆ ಘರ್ಷಣೆ ಸಂಭವಿಸಿದೆ. ಜನಾರ್ದನ ರೆಡ್ಡಿ ಮನೆಯ ಬಳಿ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ಸಂಭವಿಸಿತ್ತು. ಈ ಸಂಘರ್ಷದ ನಡುವೆ ಅಚಾನಕ್ಕಾಗಿ ಸಿಡಿದ ಗುಂಡಿಗೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತಪಟ್ಟಿದ್ದಾರೆ.
ಜನವರಿ 3 ರಂದು ವಾಲ್ಮೀಕಿ ಪುತ್ಥಳಿ ಉದ್ಘಾಟನೆ ಹಿನ್ನೆಲೆ ಕಾರ್ಯಕ್ರಮದ ಶುಭಕೋರುವ ಬ್ಯಾನರ್ ಅಳವಡಿಸಲಾಗುತ್ತಿತ್ತು. ಈ ವೇಳೆ ಜನಾರ್ದನ ರೆಡ್ಡಿ ಮನೆಯ ಬಳಿಯೂ ಬ್ಯಾನರ್ ಅಳವಡಿಕೆ ಮಾಡಲು ಯತ್ನಿಸಿದ್ದಾರೆ. ಇದನ್ನ ಜನಾರ್ದನ ರೆಡ್ಡಿ ಬೆಂಬಲಿಗರು ವಿರೋಧಿಸಿದ್ದಾರೆ. ಈ ವೇಳೆ ಹವಂಬಾವಿ ಪ್ರದೇಶದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿಯವರ ನಿವಾಸದ ಸಮೀಪ ಜನವರಿ 1ರಂದು ಸಂಜೆ ಹೊತ್ತಿಗೆ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದೆ. ರೆಡ್ಡಿಯವರ ನಿವಾಸದ ಮುಂದೆ ಬ್ಯಾನರ್ ಅಳವಡಿಕೆ ವಿಚಾರಕ್ಕೆ ಯುವಕರ ಎರಡು ಗುಂಪುಗಳ ನಡುವೆ ಗಲಾಟೆ ಸಂಭವಿಸಿದೆ. ಈ ಗಲಾಟೆ ವಿಕೋಪಕ್ಕೆ ತಿರುಗಿ ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ. ಈ ವೇಳೆ ಮಿಸ್ ಫೈರಿಂಗ್ ಆಗಿ ರಾಜಶೇಖರ್ ಎಂಬ ಯುವಕ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಪರಿಸ್ಥಿತಿ ಕೈ ಮೀರಿ ಹೋಗುತ್ತಿರುವುದನ್ನು ಗಮನಿಸಿದ ಪೊಲೀಸರು ಮೊದಲು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಲು ಯತ್ನಿಸಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದಾಗ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಗಲಭೆಯ ನಡುವೆ ಗುಂಡೊಂದು ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಎಂಬವರಿಗೆ ತಗುಲಿದ್ದು, ಗಾಯಗೊಂಡ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಾಸಕ ಭರತ್ ರೆಡ್ಡಿ ಬೆಂಬಲಿಗ, ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಅಸುನೀಗಿದ್ದಾರೆ.
