19
ಮೈಸೂರು: ರಾಜ್ಯದಲ್ಲಿ ಖಾಲಿ ಇರುವ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.
ಮಂಗಳವಾರ ಡಾ.ಕೆ.ಶಿವಕುಮಾರ್ ಅಭಿನಂದನಾ ಸಮಿತಿ ಹಾಗೂ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ನಡೆದ ವಿಧಾನ ಪರಿಷತ್ ನೂತನ ಸದಸ್ಯ ಕೆ. ಶಿವಕುಮಾರ್ ಅವರ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬ್ಯಾಕ್ ಲಾಗ್ ಹುದ್ದೆ ಸಂಬಂಧ ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್-ಅವರ ಮನವಿಗೆ ಸ್ಪಂದಿಸಿದ ಸಿಎಂ, “ಶೀಘ್ರವೇ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಹೆಚ್ಚು ದಲಿತರಿಗೆ ಉದ್ಯೋಗ ಅವಕಾಶ ಕಲ್ಪಿಸಲಾಗುವುದು,” ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ, ‘ರಾಜ್ಯದಲ್ಲಿ ಖಾಲಿ ಇರುವ 72 ಸಾವಿರ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಐದು ತಂಡಗಳನ್ನು ರಚಿಸಿ, ವರದಿ ನೀಡಲು ಸೂಚಿಸಲಾಗಿದೆ. ಒಳಮೀಸಲು ಇದ್ದ ಕಾರಣ ಬ್ಯಾಕ್ ಲಾಗ್ ಹುದ್ದೆ ಭರ್ತಿಗೆ ವಿಳಂಬವಾಯಿತು,” ಎಂದು ಹೇಳಿದರು.
