

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಎಸ್.ಕೆ. ಮರಿಗೌಡ ಕೂಡ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನಗಳನ್ನು ಪಡೆದಿದ್ದ ವಿಚಾರ ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಬೆನ್ನಲ್ಲೇ ಮರಿಗೌಡಗೆ ಸಂಬಂಧಿಸಿದ 20.85 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಇ.ಡಿ ಮುಟ್ಟುಗೋಲು ಹಾಕಿಕೊಂಡಿದೆ.
ಮುಡಾ ಅಧ್ಯಕ್ಷರಾಗಿದ್ದ ಮರಿಗೌಡ ಅಕ್ರಮ ಮಾರ್ಗದಲ್ಲಿ ಆಗಿನ ಮುಡಾ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಸಹಾಯದ ಮೂಲಕ ನಿವೇಶನಗಳನ್ನು ಪಡೆದಿದ್ದರು. ಮರಿಗೌಡ ಅವರು ದಿನೇಶ್‌ಕುಮಾರ್ ಅವರಿಂದ ಅಕ್ರಮ ಲಾಭ ಪಡೆದಿರುವುದು ತನಿಖೆಯಲ್ಲಿ ವೇದ್ಯವಾಗಿದೆ.
ಮರಿಗೌಡ ಅವರು ಮುಡಾದಿಂದ ವಾಮಮಾರ್ಗದಲ್ಲಿ ಮಂಜೂರು ಮಾಡಿಸಿಕೊಂಡಿದ್ದ ಆರು ನಿವೇಶನಗಳು ಹಾಗೂ ಮೂರು ವಸತಿ ಸಂಕೀರ್ಣ ಕಟ್ಟಡಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಸ್ಥಿರಾಸ್ತಿ ಮೌಲ್ಯ 20.85 ಕೋಟಿ ರೂ.ಗಳಾಗಿದೆ ಎಂದು ಇ.ಡಿ ತಿಳಿಸಿದೆ.
460 ಕೋಟಿ ರೂ. ಆಸ್ತಿ ಮುಟ್ಟುಗೋಲು
ಮುಡಾ ನಿವೇಶನಗಳನ್ನು ಅಕ್ರಮ ಮಾರ್ಗದಲ್ಲಿ ಹಂಚಿಕೆ ಮಾಡಿರುವ ಪ್ರಕರಣ ಸಂಬಂಧ ಇ.ಡಿ ತನಿಖೆ ನಡೆಸುತ್ತಿದೆ. ಇದುವರೆಗೂ 460 ಕೋಟಿ ರೂ.ಮೌಲ್ಯದ ಮುಟ್ಟುಗೋಲು ಹಾಕಿಕೊಂಡಿದೆ. ಈ ಹಿಂದೆ ಜಿ.ಟಿ.ದಿನೇಶ್ ಕುಮಾರ್ ಮತ್ತಿತರರು ಅಕ್ರಮವಾಗಿ ಸಂಪಾದನೆ ಮಾಡಿದ್ದ 283 ನಿವೇಶನಗಳನ್ನು ಇ.ಡಿ ಜಪ್ತಿ ಮಾಡಿತ್ತು.













