ತೆಂಗಿನಕಾಯಿಯನ್ನು ಕಲ್ಪತರು ಎಂದು ಕರೆಯಲಾಗುತ್ತದೆ. ಹಾಗೂ ಶ್ರೀಫಲವೆಂದೂ ಕೂಡ ಕರೆಯುತ್ತಾರೆ. ಶ್ರೀಫಲ ಎಂದರೆ ಶುಭಫಲ ಅಥವಾ ಎಲ್ಲಕ್ಕಿಂತ ಹೆಚ್ಚು ಸಾತ್ವಿಕತೆಯನ್ನು ಪ್ರತಿನಿಧಿಸುವ ಫಲ ಎಂಬರ್ಥವಾಗಿದೆ. ತೆಂಗಿನ ಕಾಯಿಯು ಮರದಿಂದ ಹಿಡಿದು ತೆಂಗಿನ ಕಾಯಿಯ ಸಿಪ್ಪೆಯವರೆಗೂ ಪ್ರಯೋಜನಕಾರಿಯಾಗಿದೆ. ಪುರಾತನ ಕಾಲದಿಂದಲೂ ತೆಂಗಿನ ಗರಿಗಳು ಮನೆಯ ಹೊದಿಕೆಯಾಗಿ, ತೆಂಗಿನ ಕಾಯಿಗಳು ಹಲವು ಕಾರ್ಯಗಳಿಗೆ ಬಳಸಲಾಗುತ್ತಿದೆ. ಅಷ್ಟೇ ಅಲ್ಲದೆ, ದೈವ ಶಕ್ತಿಯನ್ನು ಹೊಂದಿರುವ ತೆಂಗಿನ ಕಾಯಿಗೆ ಧಾರ್ಮಿಕ ಹಿನ್ನೆಲೆಯಲ್ಲಿ ಪವಿತ್ರವಾದ ಸ್ಥಾನವನ್ನು ನೀಡಲಾಗಿದೆ. ತೆಂಗಿನ ಕಾಯಿಯ ಬಳಕೆ ಇಲ್ಲದೆ ಯಾವುದೇ ಶುಭ ಕಾರ್ಯ ಹಾಗೂ ದೇವರ ಪೂಜೆಗಳು ಸಂಪೂರ್ಣವಾಗುವುದಿಲ್ಲ.
ಹಿಂದೂ ಧರ್ಮದಲ್ಲಿ ತೆಂಗಿನ ಕಾಯಿಗೆ ಮಹತ್ವದ ಸ್ಥಾನವಿದೆ. ತೆಂಗಿನ ಕಾಯಿಯಲ್ಲಿ ಶಿವ, ಕೃಷ್ಣ, ರಾಮ, ಗಣಪತಿ ಹಾಗೂ ದುರ್ಗಾದೇವಿ ಹೀಗೆ 5 ದೇವರುಗಳು ನೆಲೆಸಿದ್ದಾರೆಂಬ ನಂಬಿಕೆಯಿದೆ. ಇದು ಒಂದು ಸಾತ್ವಿಕ ಒಣ ಹಣ್ಣು. ಪವಿತ್ರವಾದ ಈ ಹಣ್ಣು ಶುದ್ಧ, ಪವಿತ್ರ ಹಾಗೂ ಉತ್ತಮ ಆರೋಗ್ಯದ ಗುಣಗಳನ್ನು ಒಳಗೊಂಡಿದೆ. ವಿವಾಹ, ಮನೆ ನಿರ್ಮಾಣ, ಶುಭ ಕೆಲಸಗಳಿಗೆ ಸೇರಿದಂತೆ ಇನ್ನಿತರ ಸಮಾರಂಭಗಳಲ್ಲಿ ಇದನ್ನು ವಿಶೇಷ ವಸ್ತುವನ್ನಾಗಿ ಬಳಸಲಾಗುವುದು. ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು ತೆಂಗಿನಕಾಯಿ ಒಡೆದು ದೇವರಿಗೆ ಅರ್ಪಿಸುವುದು ಶ್ರೇಯಸ್ಕರ ಎಂದು ಹೇಳಲಾಗುತ್ತದೆ.
ದೇವರಿಗೆ ತೆಂಗಿನಕಾಯಿಯನ್ನು ಅರ್ಪಿಸುವುದರಿಂದ ವ್ಯಕ್ತಿಯ ದುಃಖ ಮತ್ತು ನೋವುಗಳು ಕೊನೆಗೊಳ್ಳುತ್ತದೆ ಮತ್ತು ಸಂಪತ್ತು ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಪ್ರಸಾದವಾಗಿ ನೀಡಿದ ತೆಂಗಿನಕಾಯಿಯನ್ನು ತಿನ್ನುವುದರಿಂದ ದೇಹದ ದೌರ್ಬಲ್ಯ ದೂರವಾಗುತ್ತದೆ. ತೆಂಗಿನ ಕಾಯಿಗೆ ಪೂಜಿಸುವುದು ಹಾಗೂ ಅದನ್ನು ದೇವರಿಗೆ ಅರ್ಪಿಸುವುದರ ಮೂಲಕ ನಮ್ಮ ಮನದಂಗಿತ ಬಯಕೆಗಳನ್ನು ಈಡೇರಿಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ.
ತೆಂಗಿನಕಾಯಿಯ ಹಿನ್ನೆಲೆ : ಭಗವಾನ್ ವಿಷ್ಣುವು ಭೂಮಿಯ ಮೇಲೆ ಅವತರಿಸುವಾಗ ತನ್ನೊಂದಿಗೆ ಲಕ್ಷ್ಮಿ, ತೆಂಗಿನ ಮರ ಹಾಗೂ ಕಾಮಧೇನುವನ್ನು ಭೂಮಿಗೆ ಕರೆತಂದ ಎಂಬ ನಂಬಿಕೆ ಇದೆ. ತೆಂಗಿನ ಮರವನ್ನು ಕಲ್ಪವೃಕ್ಷ ಎಂದು ಕರೆಯುತ್ತಾರೆ. ಹಲವು ರೀತಿಯಲ್ಲಿ ಮನುಷ್ಯನಿಗೆ ಪ್ರಯೋಜನಕಾರಿಯಾಗಿದೆ. ಇದರಲ್ಲಿ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ವಾಸಿಸುತ್ತಾರೆ. ತೆಂಗಿನ ಕಾಯಿಗೆ ಇರುವ ಮೂರು ಕಣ್ಣುಗಳನ್ನು ಶಿವನ ಮೂರು ಕಣ್ಣುಗಳಿಗೆ ಹೋಲಿಸಲಾಗುವುದು. ಹಾಗಾಗಿ ತೆಂಗಿನಕಾಯಿಯನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ ಮತ್ತು ಪೂಜೆಯಲ್ಲಿ ಬಳಸಲಾಗುತ್ತದೆ.
ತೆಂಗಿನಕಾಯಿಯನ್ನು ಯಾಕೆ ಒಡೆಯುತ್ತಾರೆ ?
ಹಿಂದಿನ ಕಾಲದಲ್ಲಿ ವಿಶ್ವಾಮಿತ್ರ ಋಷಿಗಳು ಒಂದು ಬಾರಿ ಇಂದ್ರನ ಮೇಲೆ ಕೋಪಗೊಂಡು ಮತ್ತೊಂದು ಸ್ವರ್ಗವನ್ನು ಸೃಷ್ಟಿಸಲು ಪ್ರಾರಂಭಿಸಿದರು. ಆದರೆ ಎರಡನೇ ಸ್ವರ್ಗದ ಸೃಷ್ಟಿಯಿಂದ ಅವರು ಅತೃಪ್ತರಾಗಿದ್ದರು. ನಂತರ ಅವರು ಎರಡನೆಯ ಪ್ರಪಂಚವನ್ನು ಸೃಷ್ಟಿಸಲು ಮುಂದಾದರು, ಆಗ ಅವರು ತೆಂಗಿನಕಾಯಿಯನ್ನು ಮಾನವ ರೂಪದಲ್ಲಿ ಸೃಷ್ಟಿಸಿದರು. ಅದಕ್ಕೆ ತೆಂಗಿನ ಚಿಪ್ಪಿನ ಮೇಲೆ ಎರಡು ಕಣ್ಣು ಮತ್ತು ಒಂದು ಬಾಯಿಯನ್ನು ಮಾಡಲಾಗಿದೆ ಎಂದು ನಂಬಲಾಗಿದೆ. ಒಟ್ಟು ಮೂರು ಕಣ್ಣುಗಳು ಎಂದು ನಾವು ಹೇಳುತ್ತೇವೆ. ಹಿಂದಿನ ಕಾಲದಲ್ಲಿ ಪ್ರಾಣಿ ಬಲಿಕೊಡುವ ಪದ್ಧತಿ ಇತ್ತು. ಆ ಸಂಪ್ರದಾಯವನ್ನು ಮುರಿದು ತೆಂಗಿನಕಾಯಿಯನ್ನು ಅರ್ಪಿಸುವ ಪದ್ಧತಿ ಪ್ರಾರಂಭವಾಯಿತು. ಪೂಜೆಯಲ್ಲಿ ತೆಂಗಿನಕಾಯಿ ಒಡೆಯುವುದು ಎಂದರೆ ಆ ವ್ಯಕ್ತಿ ತನ್ನ ಇಷ್ಟದೈವದ ಪಾದಕ್ಕೆ ಶರಣಾಗಿದ್ದಾನೆ ಮತ್ತು ಭಗವಂತನ ಮುಂದೆ ಅವನಿಗೆ ಅಸ್ತಿತ್ವವಿಲ್ಲ ಎಂದರ್ಥ. ಅದಕ್ಕೇ ದೇವರ ಮುಂದೆ ತೆಂಗಿನಕಾಯಿ ಒಡೆಯುವುದು ಪದ್ಧತಿ ಎಂದು ಹೇಳಲಾಗುತ್ತದೆ.
