Karnataka: ಕರ್ನಾಟಕದಾದ್ಯಂತ ಚಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಕನಿಷ್ಠ ತಾಪಮಾನ ಕುಸಿಯುತ್ತಿದೆ. ಅಲ್ಲದೇ ಬೆಳಗ್ಗೆ ಮತ್ತು ರಾತ್ರಿ ದಟ್ಟ ಮಂಜು ಆವರಿಸುತ್ತಿದೆ. ಈ ವಾತಾವರಣ ಮತ್ತಷ್ಟು ಪರಿಣಾಮಕಾರಿಯಾಗಿ ರಾಜ್ಯದಲ್ಲಿ ಮುಂದುವರಿಯಲಿದೆ ಎಂದು ಮುನ್ಸೂಚನೆ ನೀಡಿರುವ ಭಾರತೀಯ ಹವಾಮಾನ ಇಲಾಖೆಯು (IMD) ಬರೋಬ್ಬರಿ 08 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಿದೆ.
ಬೀದರ್‌ನಲ್ಲಿ ರಾಜ್ಯದ ಅತೀ ಕನಿಷ್ಠ ತಾಪಮಾನ ದಾಖಲಾಗಿದೆ.ಮೊದಲು ಬೀದರ್ ಜಿಲ್ಲೆಗೆ ಮಾತ್ರ ನೀಡಿದ್ದ ಶೀತದ ಅಲೆ ಎಚ್ಚರಿಕೆ, ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳಿಗೆ ನೀಡಲಾಗಿದೆ. ಈ ಭಾಗದಲ್ಲಿ ಶೀತ ಗಾಳಿಯು ಮೇಲುಗೈ ಸಾಧಿಸಿದೆ. ಇದೇ ವಾತಾವರಣ ರಾಜ್ಯಾದ್ಯಂತ ವಿಸ್ತರಣೆ ಆಗುವ ಸಾಧ್ಯತೆಗಳು ದಟ್ಟವಾಗಿದೆ. ಅದರ ಮುನ್ಸೂಚನೆ ಎಂಬಂತೆ ಈಗಾಗಲೇ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ತಾಪಮಾನದಲ್ಲಿ ಏರಿಳಿತ ಉಂಟಾಗಿದೆ. ಮಂಜು ಆವರಿಸಿದ್ದು, ಸ್ಪಷ್ಟ ನೀಲಿ ಆಕಾಶವಿದೆ. ಹಗಲು ಒಣ ಹವೆ, ಬೆಳಗ್ಗೆ ರಾತ್ರಿ ಮೈ ಕೊರೆವ ಚಳಿ ಆವರಿಸುತ್ತಿದೆ.ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಶೀತಗಾಳಿ ಹೆಚ್ಚಾಗಲಿದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ. ತೇವ ಭರಿತ ಗಾಳಿ ಬೀಸುವಿಕೆ ವೇಗ, ಪ್ರಮಾಣ ಹೆಚ್ಚಾಗಲಿದೆ. ಈ ಭಾಗದಲ್ಲಿ ಮೈಕೊರೆವ ಚಳಿ, ಬೆಳಗ್ಗೆ ಅಧಿಕ ಮಂಜು ಆವರಿಸಲಿದೆ. ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 3-6ರಷ್ಟು ಕುಸಿಯಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ವರದಿಯಲ್ಲಿ ತಿಳಿಸಿದ್ದಾರೆ.
