ಮಂಗಳೂರು: ಮಾನವ-ಪ್ರಾಣಿ ಸಂಘರ್ಷ ತಡೆಯಲು ಮತ್ತು ಈ ಕುರಿತು ನಿಗಾ ವಹಿಸಲು ಕಮಾಂಡ್ ಸೆಂಟರ್ ಸ್ಥಾಪನೆ ಮಾಡಿದ್ದೇವೆ. ಯಾವುದೇ ಭಾಗದಿಂದ 1926 ಸಂಖ್ಯೆಗೆ ಕರೆ ಮಾಡಿದರೆ ಕೂಡಲೇ ಸ್ಪಂದನೆ ನೀಡುವ ವ್ಯವಸ್ಥೆ ಮಾಡಿದ್ದೇವೆ. ಇದನ್ನು ಈಗಾಗಲೇ ಬೆಂಗಳೂರಿನಲ್ಲಿ ಚಾಲನೆ ನೀಡಿದ್ದೇವೆ ಎಂದು ಅರಣ್ಯ, ಪರಿಸರ ಖಾತೆ ಸಚಿವ ಈಶ್ವರ್ ಬಿ.ಖಂಡ್ರೆ ಹೇಳಿದ್ದಾರೆ.
ಮಂಗಳೂರಿನ ಕದ್ರಿಯಲ್ಲಿ ಉಪ ಅರಣ್ಯ ಅಧಿಕಾರಿಗಳ ಕಚೇರಿ ಉದ್ಘಾಟನೆ ಮಾಡಿದ ನಂತರ ಸುದ್ದಿಗಾರರ ಪ್ರಶ್ನೆಗೆ ಉತ್ತರ ನೀಡುತ್ತಾ, ಕರಾವಳಿ, ಮಲೆನಾಡು ಭಾಗದಲ್ಲಿ ಹುಲಿ, ಆನೆಗಳ ಸಮಸ್ಯೆ ಇದೆ. ಈ ಕುರಿತು ಐವಾನ್ ಡಿಸೋಜ ಸೇರಿ ಈ ಭಾಗದ ಜನಪ್ರತಿನಿಧಿಗಳು ವಿಧಾನ ಪರಿಷತ್ತಿನಲ್ಲಿ ಪ್ರಶ್ನೆಗಳನ್ನು ಕೇಳಿದ್ದರು. ಆನೆಗಳ ದಾಳಿಯನ್ನು ತಡೆಯುವುದಕ್ಕಾಗಿ ಆನೆ ಕಾರ್ಯಪಡೆ ಮಾಡಿದ್ದೇವೆ. ಇದರ ಜೊತೆ ಕಮಾಂಡ್ ಸೆಂಟರ್ ಇದೆ, 1926 ನಂಬರಿಗೆ ಕರೆ ಮಾಡಿದರೆ ಕೂಡಲೇ ಸ್ಪಂದನೆ ಸಿಗಲಿದೆ.
ದೂರು ಕೊಟ್ಟರೆ ಸಂಬಂಧಪಟ್ಟ ವಿಭಾಗಕ್ಕೆ ಹೋಗುತ್ತದೆ. ಇದಲ್ಲದೆ ಕುದುರೆಮುಖ ಭಾಗದಲ್ಲಿ ಅರಣ್ಯ ವಾಸಿಗಳನ್ನು ಸ್ಥಳಾಂತರ ಮಾಡಲು ಯೋಜನೆ ಮಾಡಿದ್ದೇವೆ. ಅವರಿಗೆ ಪುನರ್ವಸತಿ ಕಲ್ಪಿಸಲು ಯೋಜನೆಗಳಿದ್ದು ಶೀಘ್ರದಲ್ಲಿಯೇ ಜಾರಿಗೆ ತರುತ್ತೇವೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್, ಐವಾನ್ ಡಿಸೋಜ ಮತ್ತಿತರಿದ್ದರು.
