ಇದೊಂದು ವಿಚಿತ್ರ ಘಟನೆ. ಈ ಘಟನೆಯಲ್ಲಿ ಕಟ್ಟಡ ನಿರ್ಮಾಣ ಮಾಡುವ ಗುತ್ತಿಗೆದಾರನೊಬ್ಬನು ತೆಂಗಿನ ಮರವನ್ನು ಏರಿ, ತನಗೆ ಬರಬೇಕಾದ ಬಾಕಿಯನ್ನು ಪಾವತಿಸದಿದ್ದರೆ ಮರದಿಂದ ಹಾರುವುದಾಗಿ ಬೆದರಿಕೆ ಹಾಕಿದ ಪ್ರಸಂಗವೊಂದು ಕೇರಳದಲ್ಲಿ ನಡೆದಿದೆ.
ತಿರುವನಂತಪುರಂನ ಹೊರವಲಯದಲ್ಲಿರುವ ನೆಯ್ಯಟ್ಟಿಂಕರ ಪಟ್ಟಣದ ಪಲ್ಲಿಯೋಡು ಕುಗ್ರಾಮದಲ್ಲಿ ಈ ಘಟನೆ ನಡೆದಿದೆ. ತಿರುವನಂತಪುರಂನ ಹೊರವಲಯದಲ್ಲಿರುವ ನೆಯ್ಯಟ್ಟಿಂಕರ ಪಟ್ಟಣದ ಪಲ್ಲಿಯೋಡು ಕುಗ್ರಾಮದಲ್ಲಿ ಈ ಘಟನೆ ನಡೆದಿದೆ.
ಈತನ ಈ ವರ್ತನೆಗೆ ಮನೆಯ ಮಾಲೀಕರು ಬಾಕಿ ಮೊತ್ತವನ್ನು ಕೊಡದೇ ಇರುವುದು ಕಾರಣವೆನ್ನಲಾಗಿದೆ. ಮನೆ ಮಾಲೀಕ ಹಣ ಪಾವತಿಸಲು ನಿರಾಕರಿಸಿದ ಪರಿಣಾಮ ಮನೆ ನಿರ್ಮಿಸಿದ ಗುತ್ತಿಗೆದಾರ ಮನೆಯ ಎದುರಿನ ತೆಂಗಿನಮರದ ಮೇಲೆ ಕುಳಿತಿದ್ದಾನೆ.
ಮನೆ ಮಾಲೀಕ ತನಗೆ 4.80 ಲಕ್ಷ ರೂಪಾಯಿ ಬಾಕಿ ಉಳಿಸಿಕೊಂಡಿದ್ದು, ಅದನ್ನು ವಸೂಲಿ ಮಾಡಲು ತಾನು ಮಾಡಿದ ಪ್ರಯತ್ನಗಳೆಲ್ಲವೂ ವ್ಯರ್ಥವಾಯಿತು ಎಂದು ಗುತ್ತಿಗೆದಾರ ಸುರೇಶ್ ತಿಳಿಸಿದ್ದಾರೆ.
ಅಗ್ನಿಶಾಮಕ ಅಧಿಕಾರಿಗಳು ಆರಂಭದಲ್ಲಿ ವ್ಯಕ್ತಿಯ ಮನವೊಲಿಸಿದ್ದಾರೆ. ಆದರೆ ಆತ ಸಮಾಧಾನಗೊಳ್ಳಲಿಲ್ಲ. ಅವನು ತನ್ನ ಬಾಕಿ ಮೊತ್ತವನ್ನು ಸ್ವೀಕರಿಸಿದ ನಂತರವೇ ಇಳಿಯುತ್ತೇನೆಂದು ಹೇಳಿದ್ದ. ಆದರೂ ಆ ವ್ಯಕ್ತಿಯ ಸುರಕ್ಷತೆಗಾಗಿ ಅಗ್ನಿಶಾಮಕ ದಳವು ತೆಂಗಿನ ಮರದ ಸುತ್ತಲೂ ಬಲೆ ಕಟ್ಟಿ ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಿತು.
ನಂತರ ಅಗ್ನಿಶಾಮಕ ದಳದ ಅಧಿಕಾರಿಗಳು ತೆಂಗಿನ ಮರವನ್ನು ಹತ್ತಿ, ಸಾಕಷ್ಟು ಮನವಿ ಮಾಡಿದ್ದಾರೆ. ಬಳಿಕ ಬಾಕಿ ಹಣವನ್ನು ಕೊಟ್ಟೇ ಕಳಿಸುವುದಾಗಿ ಭರವಸೆ ನೀಡಿದ ನಂತರ ಕೆಳಗೆ ಇಳಿದಿದ್ದಾನೆ. ಅಗ್ನಿಶಾಮಕ ದಳದ ಜೊತೆ ಪೊಲೀಸರು, ಸ್ಥಳೀಯರೂ ಸಹ ಮನವೊಲಿಕೆ ಮಾಡುವಲ್ಲಿ ಪ್ರಯತ್ನ ಪಟ್ಟಿದ್ದಾರೆ. ಆರಂಭದಲ್ಲಿ ಪ್ರಯತ್ನ ವಿಫಲವಾಗಿತ್ತು. ನಂತರ ತನ್ನ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಬೇಕು ಎಂದು ಆ ವ್ಯಕ್ತಿ ಹಠ ಮಾಡಿದ್ದರಿಂದ, ಕೊನೆಗೆ ಆ ವ್ಯಕ್ತಿಯ ಮೊಬೈಲ್ಗೆ ಎಸ್ಎಂಎಸ್ ಬಂದ ಬಳಿಕ ಕೆಳಗಿಳಿದಿದ್ದಾನೆ.
