Bangalore: ಫೆ.7 ರಂದು ರಾತ್ರಿ ರಾಗಿಗುಡ್ಡ ಮೆಟ್ರೋ ನಿಲ್ದಾಣದ ಬಳಿ ಇಬ್ಬರು ಯುವಕರು ಅವರ ಹಿಂದೆ ಓರ್ವ ಯುವತಿ ದ್ವಿಚಕ್ರ ವಾಹನದಲ್ಲಿ ತ್ರಿಬಲ್ ರೈಡಿಂಗ್ ಮಾಡುತ್ತಾ, ರಸ್ತೆಯಲ್ಲಿಯೇ ಕಿಸ್ಸಿಂಗ್ ಮಾಡುವ ವೀಡಿಯೋವೊಂದು ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದರ ಬೆನ್ನಲ್ಲೇ ನಗರ ಸಂಚಾರ ಪೊಲೀಸರು ದ್ವಿಚಕ್ರ ವಾಹನದ ಮಾಲೀಕರನ್ನು ಪತ್ತೆ ಮಾಡಿ ದಂಡ ವಿಧಿಸಿದ್ದಾರೆ.
ಒಂದು ದ್ವಿಚಕ್ರ ವಾಹನದಲ್ಲಿ ಇಬ್ಬರು ಯುವಕರು ಹಾಗೂ ಓರ್ವ ಯುವತಿ ತ್ರಿಬಲ್ ರೈಡಿಂಗ್ ಮಾಡುತ್ತಾ ರಾಗಿಗುಡ್ಡ ಬಸ್ ನಿಲ್ದಾಣದ ಕಡೆಯಿಂದ ಮೆಟ್ರೋ ನಿಲ್ದಾಣದ ಕಡೆಗೆ ಹೊರಟಿದ್ದರು. ಓರ್ವ ಯುವಕ ಗಾಡಿ ಚಲಾಯಿಸುತ್ತಿದ್ದರೆ, ಆತನ ಹಿಂದೆ ಕುಳಿತಿದ್ದ ಯುವಕ, ಯುವತಿ ಬೈಕ್ ಚಾಲನೆ ಸಂದರ್ಭ ಪರಸ್ಪರ ಚುಂಬಿಸಿಕೊಂಡು ಅಸಭ್ಯ ವರ್ತನೆ ಮಾಡಿದ್ದಾರೆ.
ಹಿಂದುಗಡೆಯಿಂದ ಬರುತ್ತಿದ್ದ ದ್ವಿಚಕ್ರ ವಾಹನ ಸವಾರರೊಬ್ಬರು ತಮ್ಮ ಮೊಬೈಲ್‌ನಲ್ಲಿ ಇದನ್ನು ಸೆರೆ ಹಿಡಿದಿದ್ದಾರೆ. ಅದನ್ನು ಪ್ರಶ್ನೆ ಮಾಡಿದ ಆ ಸವಾರನಿಗೆ ಯುವಕರು ಧಮ್ಕಿ ಹಾಕಿದ್ದಾರೆ. ಈ ವೀಡಿಯೋವನ್ನು ಎಕ್ಸ್ ಖಾತೆಯಲ್ಲಿ ಚೇತನ್ ಸೂರ್ಯ ಎಂಬುವವರು ಪೋಸ್ಟ್ ಮಾಡಿ ಸಂಚಾರ ಪೊಲೀಸರಿಗೆ ಟ್ಯಾಗ್ ಮಾಡಿದ್ದರು.
ಕೂಡಲೇ ಸಂಚಾರ ಪೊಲೀಸರು ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆಯನ್ನು ಆಧರಿಸಿ ಮಾಲೀಕನನ್ನು ಪತ್ತೆ ಮಾಡಿ ದಂಡ ವಸೂಲಿ ಮಾಡಿದ್ದಾರೆ.
