Crime news: ವಿದ್ಯಾರ್ಥಿನಿಯೋರ್ವಳ ಬ್ಯಾಗ್ ನಲ್ಲಿ ಲವ್ ಲೆಟರ್ ಇರಿಸಿದ್ದಲ್ಲದೇ,ನೀರಿನ ಬಾಟಲ್ ಗೆ ಮೂತ್ರ ತುಂಬಿಸಿಟ್ಟ ಪ್ರಕರಣವೊಂದು ಶಾಲಾ ಮಟ್ಟದಲ್ಲೇ ಮುಚ್ಚಿ ಹಾಕುವ ಯತ್ನಕ್ಕೆ ಆಕ್ರೋಶಗೊಂಡ ಪೋಷಕರಿಂದ ನಡೆದ ಪ್ರತಿಭಟನೆಯು ಘರ್ಷಣೆಗೆ ತಿರುಗುತ್ತಿದ್ದಂತೆ ಲಾಠಿ ಚಾರ್ಜ್ ನಡೆದ ಬಗ್ಗೆ ರಾಜಸ್ಥಾನದ ಬಿಲ್ವಾರ ಜಿಲ್ಲೆಯಿಂದ ವರದಿಯಾಗಿದೆ.
ಇಲ್ಲಿನ ಶಾಲೆಯೊಂದರಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಯೋರ್ವಳು ಮಧ್ಯಾಹ್ನದ ಊಟದ ಸಮಯದಲ್ಲಿ ಬ್ಯಾಗ್ ನಲ್ಲಿದ್ದ ನೀರಿನ ಬಾಟಲ್ ತೆಗೆಯುವಾಗ ಲವ್ ಲೆಟರ್ ಒಂದು ಪತ್ತೆಯಾಗಿತ್ತು. ಈ ಬಗ್ಗೆ ತಲೆಕೆಡಿಸಿಕೊಳ್ಳದ ಆಕೆ ಊಟದ ಬಳಿಕ ಬಾಟಲ್ ನಲ್ಲಿದ್ದ ನೀರನ್ನು ಕುಡಿದಾಗ ಬಾಟಲ್ ನಲ್ಲಿ ಮೂತ್ರ ತುಂಬಿಸಿರುವುದು ಪತ್ತೆಯಾಗಿದ್ದು, ಮೂತ್ರ ಕುಡಿದ ಬಾಲಕಿ ವಾಂತಿ ಮಾಡಿದ್ದಾಳೆ ಎನ್ನಲಾಗಿದೆ.
ಈ ಕೃತ್ಯ ಎಸಗಿದ್ದಾರೆ ಎನ್ನಲಾದ ಆಕೆಯ ಸಹಪಾಠಿಗಳಾದ ಅನ್ಯಕೋಮಿನ ವಿದ್ಯಾರ್ಥಿಗಳನ್ನು ಹೆಡ್ ಮಾಸ್ಟರ್ ಚೇಂಬರ್ ಗೆ ಕರೆಸಿ ಬುದ್ಧಿ ಮಾತು ಹೇಳಿ ಕಳುಹಿಸಿಕೊಟ್ಟ ಬಳಿಕ ಪ್ರಕರಣವನ್ನು ಶಾಂತಿಗೊಳಿಸಲಾಗಿತ್ತು. ಸಂಜೆಯಾಗುತ್ತಲೇ ವಿದ್ಯಾರ್ಥಿನಿ ಮನೆಗೆ ತೆರಳಿ ನಡೆದ ವಿಚಾರವನ್ನು ತಿಳಿಸಿದ ಪರಿಣಾಮ ಆಕ್ರೋಶಗೊಂಡ ಪೋಷಕರು ಶಾಲಾ ಶಿಕ್ಷಕರ ನಡೆಗೆ ಕೋಪಗೊಂಡಿದ್ದು, ವಿಚಾರ ಎಲ್ಲೆಡೆ ಸುದ್ದಿಯಾಗಿದೆ ಎನ್ನಲಾಗಿದೆ.
ಕೂಡಲೇ ಜಾತಿ ನಾಯಕರ ಸಹಿತ ವಿದ್ಯಾರ್ಥಿಗಳ ಪೋಷಕರು ಶಾಲೆಗೆ ಮುತ್ತಿಗೆ ಹಾಕಿದ್ದು, ಮೂತ್ರ ತುಂಬಿಸಿಟ್ಟ ವಿದ್ಯಾರ್ಥಿಗಳು ಅನ್ಯ ಕೋಮಿನವರು ಎನ್ನುವುದು ಅರಿತಿದ್ದರೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ, ವಿದ್ಯಾರ್ಥಿನಿಯ ಬ್ಯಾಗ್ ನಲ್ಲಿ ಲವ್ ಲೆಟರ್ ಪತ್ತೆಯಾಗಿದ್ದರೂ ಕ್ರಮ ಕೈಗೊಂಡಿಲ್ಲ ಎನ್ನುವ ಆಕ್ರೋಶದ ಹೋರಾಟ ಘರ್ಷಣೆಗೆ ಕಾರಣವಾಗುತ್ತಲೇ ಮಧ್ಯಪ್ರವೇಶಿಸಿದ ಪೊಲೀಸರು ಲಾಠಿ ಚಾರ್ಜ್ ನಡೆಸುವ ಮೂಲಕ ಗುಂಪನ್ನು ಚದುರಿಸಿದ್ದಾರೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
