ಅದೊಂದು ಸುಂದರ ಸಂಸಾರ. ಗಂಡ ಕುರಿ ಕಾಯುವವನೇ ಆಗಿದ್ದರೂ, ಇಬ್ಬರು ಮಕ್ಕಳೊಂದಿಗೆ ಆ ಸಂಸಾರ ನೆಮ್ಮದಿಯಾಗಿ ಸಾಗುತ್ತಿತ್ತು. ಗಂಡ ಹೆಂಡತಿ ಚೆನ್ನಾಗಿ ಇದ್ದ ಆ ಕುಟುಂಬದಲ್ಲಿ ಶನಿಯಾಗಿ ಬಂದವನೇ ಗಂಡನ ಸ್ನೇಹಿತ. ಮುಂದೆ ಆದದ್ದೆಲ್ಲ ಘೋರ ಘಟನೆ.
ಹೌದು. ಸೆ.30 ರಂದು ಕುಮಟಾ ತಾಲೂಕಿನ ದೇವಿಮನೆ ಘಟ್ಟದ ದೇವಸ್ಥಾನವೊಂದರ ಹಿಂಬದಿ ಒಂದು ಅಪರಿಚಿತ ಶವವೊಂದು ಪತ್ತೆಯಾಗಿತ್ತು. ಅಲ್ಲಿಗೆ ಕುಮಾಟಾ ಪೊಲೀಸರು ಹೋದಾಗ, ಸರಿ ಸುಮಾರು 36-40 ರ ಪುರುಷನನ್ನು ಯಾರೋ ಕೊಲೆ ಮಾಡಿ ಹೋಗಿದ್ದರು. ನಂತರ ಪೊಲೀಸರು ತನಿಖೆಯ ಜಾಡು ಹತ್ತಿದಾಗ ಗೊತ್ತಾದದ್ದೇ ಇದೊಂದು ಅನೈತಿಕ ಸಂಬಂಧದ ಕೊಲೆ ಎಂದು.
ಶವದ ಗುರುತು ಪತ್ತೆಗೆಂದು ಕುಮಟಾ ಪೊಲೀಸರು ಕಾರ್ಯಾಚರಣೆಗೆ ಇಳಿದಾಗ ಏನೂ ಮಾಹಿತಿ ಕೂಡಾ ಸಿಗಲಿಲ್ಲ. ಆದರೆ ಆ ಶವದ ಕಿಸೆಯಲ್ಲಿತ್ತು ನೋಡಿ ಒಂದು ಬಸ್ ಟಿಕೆಟ್. ಅಷ್ಟೇ ಸಾಕಿತ್ತು, ಕೊಲೆಗಾರ ಯಾರು ಎಂದು ಕಂಡು ಹಿಡಿಯಲು. ಮುಂದಾದ್ದೆಲ್ಲ ರೋಚಕ.
ಕೇವಲ ಒಂದು ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ಮೂಲಕ ಪೊಲೀಸರು ಈ ಕೃತ್ಯದ ಹಿಂದೆ ಇದ್ದ ಎಲ್ಲಾ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.
ನಾಪತ್ತೆ ಪ್ರಕರಣಗಳ ಪತ್ತೆಗೆ ಮುಂದಾದ ಪೊಲೀಸರು, ಈ ಮೃತ ವ್ಯಕ್ತಿ ಬಾಗಲಕೋಟೆ ಜಿಲ್ಲೆಯ ಹೊಸೂರು ಗ್ರಾಮದ ಬಶೀರಸಾಬ್ ಎಂಬ ವ್ಯಕ್ತಿ ಎಂದು ತಿಳಿದು ಬಂದಿದೆ. ಅನಂತರ ಪೊಲೀಸರು ಆತನ ಊರಿನಲ್ಲಿ ವಿಚಾರಣೆಗೆ ಹೋದಾಗ ಗೊತ್ತಾದದ್ದೇ ಆತನ ಪತ್ನಿ ಹಾಗೂ ಬಶೀರ್ ಸಾಬ್‌ಗೆ ಆಗಾಗ ಗಲಾಟೆ ಆಗುತ್ತಿತ್ತು ಎಂಬುವುದರ ಬಗ್ಗೆ.
ಕೊನೆಗೆ ಬಶೀರ್‌ಸಾಬ್‌ನ ಪತ್ನಿಯನ್ನೇ ಪೊಲೀಸರು ವಿಚಾರಣೆ ಆರಂಭಿಸಿದಾಗ ಸಿಕ್ತು ನೋಡಿ ವಿಷಯ. ಏನದು? ಆರೋಪಿ ರಾಜಮಾಗೆ ಇಬ್ಬರು ಮಕ್ಕಳಿದ್ದಾರೆ. ಪತಿ ಬಶೀರ್‌ಸಾಬ್ ಜೊತೆ ಈಕೆ ಚೆನ್ನಾಗಿಯೇ ಸಂಸಾರ ಮಾಡಿಕೊಂಡಿದ್ದಳು. ಆದರೆ ಕೆಲ ದಿನಗಳ ಹಿಂದೆ ಬಾದಾಮಿ ತಾಲೂಕಿನಲ್ಲಿ ನಡೆದ ಜಾತ್ರೆಯೊಂದರಲ್ಲಿ ಕುರಿ ಮಾರಾಟ ಮಾಡಲು ಬಶೀರಸಾಬ್ ಸಹೋದರ ಖಾಸಿಂ ತೆರಳಿದ್ದ ವೇಳೆ ಆರೋಪಿ ಪರಶುರಾಮನ ಪರಿಚಯ ಆಗಿತ್ತು. ಖಾಸಿಂ ಪರಿಚಯದ ಮೂಲಕ ಆರೋಪಿ ಪರಶುರಾಮ್ ಬಶೀರಸಾಬ್ ಮನೆಗೆ ಆಗಾಗ ಬರತೊಡಗಿದ. ಆಕೆ ಮದುವೆಯಾದವಳು, ಪರರ ಸೊತ್ತು ಎಂದು ಗೊತ್ತಿದ್ದರೂ ಈತ ಕಣ್ಣಾಕಿದ. ನಂತರ ಇಬ್ಬರಲ್ಲೂ ಪ್ರೇಮ ಚಿಗುರೊಡೆಯಿತು. ಜೊತೆಗೆ ರಾಜಮಾ ಹಾಗೂ ಪರಶುರಾಮ್ ಇಬ್ಬರದ್ದೂ ಒಂದೇ ಊರು, ಇದೂ ಇವರಿಬ್ಬರು ಜೊತೆಯಾಗಿರಲು ಮತ್ತೊಂದು ಕಾರಣವಾಗಿತ್ತು.
ಇವರಿಬ್ಬರ ಮಧ್ಯೆ ನಡೆದಿದ್ದ ಅನೈತಿಕ ಸಂಬಂಧ ಗಂಡನಿಗೆ ಗೊತ್ತಾಗಿ ಗಂಡ ಹೆಂಡತಿಯರಲ್ಲಿ ಗಲಾಟೆ ಪ್ರಾರಂಭವಾಗತೊಡಗಿತು. ಕೊನೆಗೆ ರಾಜಮಾ ತನ್ನ ತವರು ಮನೆಗೆ ಹೋದಳು. ಅಲ್ಲಿಗೆ ಸೆ.26 ರಂದು ತನ್ನ ಪ್ರಿಯಕರ ಪರಶುರಾಮನನ್ನು ಕರೆಸಿಕೊಂಡು ಹತ್ತು ಸಾವಿರ ನೀಡಿ ಪತಿಯನ್ನು ಕೊಲೆ ಮಾಡಲು ಹೇಳಿದ್ದಾಳೆ.
ಅಲ್ಲಿಂದ ಶುರುವಾದದ್ದೇ ಮಂಗಳೂರು ಪ್ರವಾಸದ ಸ್ಟೋರಿ. ಪರಶುರಾಮ್ ಬಶೀರ್‌ಸಾಬನನ್ನು ಕರೆದುಕೊಂಡು ಮಂಗಳೂರಿಗೆ ಕರೆದುಕೊಂಡು ಬಂದಿದ್ದ. ಇವನ ಜೊತೆ ಇವನ ಸ್ನೇಹಿತರಾದ ರವಿ ಮತ್ತು ಆದೇಶ ಎನ್ನುವವರು ಕೂಡಾ ಇದ್ದರು. ಮಂಗಳೂರು ಪ್ರವಾಸ ಮುಗಿಸಿದ ಇವರು ವಾಪಸ್ ಹೊರಟಿದ್ದಾರೆ. ನಂತರ ಮಧ್ಯದಲ್ಲಿ ಬಸ್‌ನಿಂದ ದೇವಿಮನೆ ಘಟ್ಟ ಎಂಬಲ್ಲಿ ಇಳಿದಿದ್ದಾರೆ. ಅಲ್ಲೊಂದು ಇದ್ದ ದೇವಸ್ಥಾನದ ಹಿಂದೆ ಹೋಗಿ ನಾಲ್ವರು ಕುಡಿಯಲು ಕುಳಿತಿದ್ದಾರೆ. ನಂತರ ಚೆನ್ನಾಗಿ ಕುಡಿದಿದ್ದ ಬಶೀರ್‌ಸಾಬ್ ತಲೆಗೆ ಪರಶುರಾಮ್, ರವಿ, ಆದೇಶ ಈ ಮೂವರು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಇವಿಷ್ಟು ತನಿಖೆಯ ನಂತರ ಎಲ್ಲಾ ಗೊತ್ತಾಗಿದೆ. ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಗಂಡನನ್ನು ತನ್ನ ಪ್ರಿಯಕರನಿಗೆ ಸುಪಾರಿ ನೀಡಿ ಆತನ ಮೂಲಕ ಕೊಲೆ ಮಾಡಿದ ಈ ಐನಾತಿ ಹೆಂಡತಿಗೆ ಏನನ್ನಬೇಕು?
ಹಾಗೆನೇ ಈ ಕೊಲೆ ರಹಸ್ಯವನ್ನು ಕೆಲವೇ ದಿನಗಳ ಅಂತರದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ನಮ್ಮ ಪೊಲೀಸ್ ತಂಡ ಯಶಸ್ವಿಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಹೇಳಿದ್ದು ಮಾತ್ರವಲ್ಲದೇ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
