Dakshina Kannada: ಮಂಗಳೂರು: ಕ್ಷೇತ್ರ ಪುನರ್ ವಿಂಗಡಣೆ ಹಂಚಿಕೆ ಪ್ರಕಾರ ಮುಂದಿನ ದಿನಗಳಲ್ಲಿ ಈಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಮಹತ್ತರ ಬದಲಾವಣೆಯಾಗುವ ಸಾಧ್ಯತೆಗಳ ಸುಳಿವು ಹೊಸ ಕನ್ನಡ ಮಾಧ್ಯಮಕ್ಕೆ ಲಭ್ಯವಾಗಿದೆ. ಇದರ ಜೊತೆಗೆ ರಾಜಕೀಯ ಕ್ಷೇತ್ರಗಳಲ್ಲಿ ಮುಂದಿನ ದಿನಗಳಲ್ಲಿ ಮಹಿಳೆಯರಿಗೆ 33 ಶೇಕಡಾ ಮೀಸಲಾತಿಯು ಜಾರಿಗೆ ಬರುವ ಸ್ಪಷ್ಟ ಮಾಹಿತಿಗಳು ಕೂಡ ಲಭ್ಯವಾಗಿದೆ.
ಹೀಗಾಗಿ ಮುಂದಿನ ದಿನಗಳಲ್ಲಿ ಪುತ್ತೂರು ಮತ್ತು ಕಡಬ ವಿಧಾನಸಭಾ ಕ್ಷೇತ್ರಗಳು ಸಾಮಾನ್ಯ ಮಹಿಳಾ ಮೀಸಲು ಕ್ಷೇತ್ರವಾಗಿ ಬದಲಾಗುವ ಸಾಧ್ಯತೆಗಳು ಸ್ಪಷ್ಟವಾಗಿದೆ ಎನ್ನಲಾಗುತ್ತಿದೆ.ಅದೇ ರೀತಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರವು ಪರಿಶಿಷ್ಟ ಜಾತಿಯ ಮಹಿಳಾ ಮೀಸಲು ಕ್ಷೇತ್ರವಾಗಿ ಬದಲಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹಾಗೆಯೇ ಉಳ್ಳಾಲ ವಿಧಾನಸಭಾ ಕ್ಷೇತ್ರವು ಉತ್ತರ ಮತ್ತು ದಕ್ಷಿಣ ಎಂಬ ಎರಡು ಮುಸ್ಲಿಂ ಮೀಸಲು ವಿಧಾನಸಭಾ ಕ್ಷೇತ್ರವಾಗಿ ಮಾರ್ಪಾಟಾಗಿ ಈ ಪೈಕಿ ಒಂದು ಮುಸ್ಲಿಂ ಮಹಿಳಾ ಮೀಸಲು ಕ್ಷೇತ್ರವಾಗುವ ಸಾಧ್ಯತೆಗಳು ಇವೆ ಎಂಬ ಮಾಹಿತಿಗಳು ಲಭ್ಯವಾಗಿದೆ.
ಮುಂದಿನ ವಿಧಾನಸಭಾ ಚುನಾವಣೆಗಿಂತ ಮೊದಲೇ ಕ್ಷೇತ್ರ ಪುನರ್ವಿಂಗಡಣೆಯಾಗುವ ಸ್ಪಷ್ಟ ಸುಳಿವು ಬಿಜೆಪಿಗೆ ಈಗಾಗಲೇ ತಿಳಿದಿರುವುದರಿಂದ ಬಿಜೆಪಿ ಈಗಾಗಲೇ ಯಾವುದೇ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಮಾರ್ಪಾಟಾ ದರೂ ಅದಕ್ಕೆ ತಕ್ಕಂತೆ ಗೆಲ್ಲುವ ಅಭ್ಯರ್ಥಿಗಳ ಸೂಕ್ತ ತಲಾಶೆ ಹಾಗೂ ಚುನಾವಣೆ ಸಂಬಂಧಿತ ಎಲ್ಲಾ ಕಾರ್ಯತಂತ್ರ ಹಾಗೂ ಇನ್ನಿತರ ಸಿದ್ಧತೆಗಳನ್ನು ಮಾಡಿಕೊಳ್ಳಲು ಕಾರ್ಯ ಪ್ರವರ್ತವಾಗಿದೆ ಎನ್ನುವ ಮಾಹಿತಿಗಳು ಲಭ್ಯವಾಗುತ್ತಿವೆ.
ಹೀಗಾಗಿ ಒಂದು ವೇಳೆ ಪುತ್ತೂರು ಮತ್ತು ಕಡಬ ವಿಧಾನಸಭಾ ಕ್ಷೇತ್ರವು ಸಾಮಾನ್ಯ ವರ್ಗದ ಮಹಿಳಾ ಮೀಸಲು ಕ್ಷೇತ್ರವಾದರೆ ಗೆಲ್ಲುವ ಸಮರ್ಥ ಮಹಿಳಾ ಅಭ್ಯರ್ಥಿಗಳ ತಲಾಶ್,ಸಮೀಕ್ಷೆ ಹಾಗೂ ರಾಜಕೀಯ ತಂತ್ರಗಾರಿಕೆಗಳೆಲ್ಲವನ್ನೂ ನಡೆಸುತ್ತಿರುವುದರ ಮಾಹಿತಿಗಳು ತಿಳಿದು ಬಂದಿದೆ. ಅದೇ ರೀತಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರವು ಪರಿಶಿಷ್ಟ ಮಹಿಳಾ ಮೀಸಲು ಅಥವಾ ಸಾಮಾನ್ಯ ಮಹಿಳಾ ಮೀಸಲು ಕ್ಷೇತ್ರವಾಗಿ ಬದಲಾದರೆ ಅಲ್ಲಿಯೂ ಗೆಲ್ಲುವ ಸಮರ್ಥ ಮಹಿಳಾ ಅಭ್ಯರ್ಥಿಗಳ ಹುಡುಕಾಟ ಹುಡುಕಾಟ, ಲೆಕ್ಕಾಚಾರಗಳೆಲ್ಲವನ್ನು ಮಾಡತೊಡಗಿದೆ ಎನ್ನಲಾಗುತ್ತಿದೆ.
ಒಂದು ವೇಳೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರವು ಸಾಮಾನ್ಯ ಮಹಿಳಾ ಮೀಸಲು ಕ್ಷೇತ್ರವಾದರೆ ವಸಂತ ಬಂಗೇರರ ಮಗಳನ್ನು ಬಿಜೆಪಿಗೆ ಸೆಳೆದು, ಬಿಜೆಪಿ ಪಕ್ಷದಲ್ಲ ನಿಲ್ಲಿಸುವ ಬಗ್ಗೆಯೂ ಈಗಾಗಲೇ ಮಾತುಕತೆಗಳು ನಡೆದಿದೆ ಎಂಬ ಮಾಹಿತಿಗಳು ಕೂಡ ಕೇಳಿ ಬರುತ್ತಿವೆ.
ಇದೇ ರೀತಿ ಕಾಂಗ್ರೆಸ್ ಪಕ್ಷಕ್ಕೂ ಈ ಕ್ಷೇತ್ರ ಪುನರ್ವಿಂಗಡಣೆಯ ಕುರಿತಾದ ಸ್ಪಷ್ಟ ಮಾಹಿತಿಗಳು ಈಗಾಗಲೇ ಸಿಕ್ಕಿದ್ದರಿಂದ ಕಾಂಗ್ರೆಸ್ ಕೂಡ ತೆರೆಮರೆಯಲ್ಲಿ ಬದಲಾಗಬಹುದಾದ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ಸಮರ್ಥ ಅಭ್ಯರ್ಥಿಗಳಿಗಾಗಿ ರಹಸ್ಯ ಕಾರ್ಯಾಚರಣೆಗೆ ಇಳಿದಿದೆ ಎನ್ನಲಾಗುತ್ತಿದೆ. ಹೀಗಾಗಿ ಒಂದು ವೇಳೆ ಪುತ್ತೂರು ವಿಧಾನಸಭಾ ಕ್ಷೇತ್ರ ಸಾಮಾನ್ಯ ಮಹಿಳಾ ವರ್ಗಕ್ಕೆ ಮೀಸಲಾದರೆ ಕಾಂಗ್ರೆಸ್ ನಲ್ಲಿ ಮುಂದೆ ಅಶೋಕ ರೈಗಳಿಗೆ ಸ್ಪರ್ಧಿಸುವ ಚಾನ್ಸ್ ತಪ್ಪಿ ಅದರ ಬದಲು ಕಾವು ಹೇಮನಾಥ ಶೆಟ್ಟಿಯವರ ಪತ್ನಿಯವರನ್ನು ಕಾಂಗ್ರೆಸ್ ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ಸಾಧ್ಯತೆ ಇದೆ ಎಂಬ ಮಾಹಿತಿಗಳು ಲಭ್ಯವಾಗುತ್ತಿವೆ.
ಹಾಗೆಯೇ ಕಡಬ ವಿಧಾನಸಭಾ ಕ್ಷೇತ್ರದಲ್ಲೂ ಕೂಡ ಕಾಂಗ್ರೆಸ್ ಈಗಾಗಲೇ ಸೂಕ್ತ ಮಹಿಳಾ ಅಭ್ಯರ್ಥಿಯೋರ್ವರನ್ನು ಆಯ್ಕೆ ಮಾಡಿಕೊಂಡಿದೆ ಎ ನ್ನುವ ಸೂಚನೆಗಳು ಕೂಡ ಲಭ್ಯವಾಗಿದೆ. ಅದೇ ರೀತಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಒಂದು ವೇಳೆ ಪರಿಶಿಷ್ಟ ಜಾತಿಯ ಮಹಿಳಾ ಮೀಸಲು ಕ್ಷೇತ್ರವಾದಲ್ಲಿ ಪರಿಶಿಷ್ಟ ಜಾತಿಯ ಸೂಕ್ತ ಮಹಿಳೆ ಒಬ್ಬರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಈಗಾಗಲೇ ಮು ಮುಂದಾಗಿದೆ ಎನ್ನಲಾಗುತ್ತಿದೆ.
ಆದರೆ ಒಂದು ವೇಳೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರವು ಸಾಮಾನ್ಯ ಮಹಿಳಾ ಮೀಸಲು ಕ್ಷೇತ್ರವಾದರೆ ಕಾಂಗ್ರೆಸ್ ನ ಸಂಭಾವ್ಯ ಅಭ್ಯರ್ಥಿಯೆಂದು ಈಗಾಗಲೇ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ರಕ್ಷಿತ್ ಶಿವರಾಮ್ ರಿಗೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಕನಸು ಭಗ್ನವಾಗಿ ಅದರ ಬದಲು ಕಾಂಗ್ರೆಸ್ಸಿನ ಮಾಜಿ ಶಾಸಕ ವಸಂತ ಬಂಗೇರರ ಮಗಳನ್ನು ಕಣಕ್ಕಿಳಿಸುವ ಬಗ್ಗೆಯೂ ಕಾಂಗ್ರೆಸ್ ನ ಉನ್ನತ ನಾಯಕರು ಈಗಾಗಲೇ ತೀರ್ಮಾನಿಸಿದ್ದಾರೆ ಎನ್ನುವ ಮಾಹಿತಿಗಳು ಕೂಡ ಲಭ್ಯವಾಗಿದೆ.
ಈ ನಡುವೆ ಉಳ್ಳಾಲ ವಿಧಾನಸಭಾ ಕ್ಷೇತ್ರವು ಮುಂದಿನ ದಿನಗಳಲ್ಲಿ ಉತ್ತರ ಮತ್ತು ದಕ್ಷಿಣ ಕ್ಷೇತ್ರವೆಂದು ಹಂಚಿಕೆಯಾಗಿ ಒಂದು ಕ್ಷೇತ್ರ ಮುಸ್ಲಿಂ ಮಹಿಳಾ ಮೀಸಲು ಕ್ಷೇತ್ರವಾಗಲಿದೆ ಎಂಬ ಮಾಹಿತಿಗಳು ಸಹ ಕೇಳಿ ಬರುತ್ತಿವೆ ಎನ್ನಲಾಗಿದೆ. ಹೀಗಾಗಿ ಈ ಮೊದಲು ಜಾತಿ, ಹಣ,ಸಂಘಟನೆ, ಇನ್ಫ್ಲ್ಯೂಯೆನ್ಸ್ ಇತ್ಯಾದಿ ಮಾನದಂಡಗಳಿಂದಲೇ ನಡೆಯುತ್ತಿದ್ದ ವಿವಿಧ ಪಕ್ಷಗಳ ಅಭ್ಯರ್ಥಿಗಳ ಆಯ್ಕೆ ಮುಂದಿನ ದಿನಗಳಲ್ಲಿ ಕ್ಷೇತ್ರದ ಪುನರ್ವಿಂಗಡಣೆ ಮತ್ತು ಮಹಿಳೆಯರಿಗೆ 33 ಶೇಕಡಾ ಮೀಸಲಾತಿ ಜಾರಿಯ ಪರಿಣಾಮದಿಂದಾಗಿ ಅನಿವಾರ್ಯವಾಗಿ ಈ ಹಿಂದಿನ ಮಾನದಂಡಗಳೆಲ್ಲ ಸಂಪೂರ್ಣ ಬದಲಾಗಿ ಸಮಾಜ ಸೇವೆ.ಪಕ್ಷ ನಿಷ್ಠೆ,ಪ್ರಾಮಾಣಿಕತೆ,ಸಾಧನೆ ಇತ್ಯಾದಿ ಮಾನದಂಡಗಳಿಗೆ ಮಾನ್ಯತೆಗಳು ಸಿಗುವ ಸಾಧ್ಯತೆ ಇದೆ ಎಂಬುದು ಸ್ಪಷ್ಟವಾಗುತ್ತಿದೆ.
