Home » ಪ್ರಾರ್ಥನೆ ಮಾಡಲೆಂದು ದೇವಸ್ಥಾನಕ್ಕೆ ಪ್ರವೇಶಿಸಿದ ದಲಿತ ಯುವಕನಿಗೆ ಭಾರೀ ಥಳಿತ | ದೂರು ದಾಖಲು

ಪ್ರಾರ್ಥನೆ ಮಾಡಲೆಂದು ದೇವಸ್ಥಾನಕ್ಕೆ ಪ್ರವೇಶಿಸಿದ ದಲಿತ ಯುವಕನಿಗೆ ಭಾರೀ ಥಳಿತ | ದೂರು ದಾಖಲು

0 comments

ಸಮಾಜದಲ್ಲಿ ಇಂದಿಗೂ ಮೇಲು ಕೀಳೆಂಬ ಭಾವನೆ ಉಳಿದಿರುವುದು ದುರದೃಷ್ಟಕರ ಎಂದೇ ಹೇಳಬಹುದು. ಏಕೆಂದರೆ ದೇವರ ದರ್ಶನಕ್ಕೆಂದು ಬಂದ ಓರ್ವ ಯುವಕನನ್ನು ಆತನ ಜಾತಿಯ ಕಾರಣದಿಂದ ಮನಬಂದಂತೆ ಥಳಿಸಿದ ಘಟನೆ ನಡೆದಿರುವುದು ನಿಜಕ್ಕೂ ಖೇದಕರ ಎಂದೇ ಹೇಳಬಹುದು. ಹೌದು, ಇಂತಹ ಹೀನಾಯ ಘಟನೆಯೊಂದು ಉತ್ತರಕಾಶೀಯ ಮೋರಿ ಪ್ರದೇಶದ ಸಾಲ್ರಾ ಗ್ರಾಮದಲ್ಲಿ ನಡೆದಿದೆ.

ಬನೋಲ್ ಗ್ರಾಮದ ನಿವಾಸಿ ಅತ್ತರ್ ಲಾಲ್ ಎಂಬವರ ಮಗ ಆಯುಷ್ ಎಂಬಾತನೇ ಈ ತೀವ್ರ ಥಳಿತಕ್ಕೊಳಗಾದ ಯುವಕ. ಜನವರಿ 9 ರಂದು ಸಂಜೆ 7 ಗಂಟೆಗೆ ಗ್ರಾಮದ ಕೌನ್ವಾಲ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಹೋಗಿದ್ದ ಸಂದರ್ಭದಲ್ಲಿ ಈ ದೌರ್ಜನ್ಯ ನಡೆದಿದ್ದು, ದೇವಸ್ಥಾನದಲ್ಲಿ ಮೇಲ್ವರ್ಗದ ಕೆಲವರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತ ಯುವಕ ದೂರು ನೀಡಿದ್ದಾರೆ. ಆಯುಷ್ ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ದೇವಸ್ಥಾನಕ್ಕೆ ಹೋಗಿದ್ದ ವೇಳೆ ಕೆಲವರು ಏಕಾಏಕಿ ನನ್ನ ಮೇಲೆ ಹಲ್ಲೆ ನಡೆಸಿದರು, ನಂತರ ದೇವಸ್ಥಾನದ ಕಂಬಕ್ಕೆ ಕಟ್ಟಿ ಹಾಕಿದರು. ಗ್ರಾಮದ ಐವರು ಮೇಲ್ಜಾತಿಯವರು ದೊಣ್ಣೆಯಿಂದ ಹಲ್ಲೆ ಮಾಡಿ ಬೆಂಕಿ ಇಂದ ಸುಟ್ಟಿದ್ದಾರೆ, ಈ ಸಮಯದಲ್ಲಿ ಪ್ರಜ್ಞೆ ತಪ್ಪಿತ್ತು, ಜನವರಿ 10 ರಂದು ಎಚ್ಚರಗೊಂಡಾಗ ಮೈಯಲ್ಲಿ ಬಟ್ಟೆಗಳಿರಲಿಲ್ಲ, ಹೇಗೋ ಮಾಡಿ ದೇವಸ್ಥಾನದ ಆವರಣದಿಂದ ತಪ್ಪಿಸಿಕೊಂಡು ಬಂದೆ ಎಂದು ಯುವಕ ಹೇಳಿದ್ದಾನೆ.

ತೀವ್ರವಾಗಿ ಗಾಯಗೊಂಡ ಯುವಕನನ್ನು ಜನವರಿ 10 ರಂದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಉನ್ನತ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಲಿತನಾಗಿದ್ದು ದೇವಾಲಯ ಪ್ರವೇಶಿಸಿದ್ದರಿಂದ ದಾಳಿಕೋರರು ಕೋಪಗೊಂಡಿದ್ದರು ಎಂದು ಆಯುಷ್ ದೂರಿನಲ್ಲಿ ತಿಳಿಸಿದ್ದಾರೆ.

ಸಂತ್ರಸ್ತ ನೀಡಿದ ದೂರಿನ ಆಧಾರದ ಮೇಲೆ, ಘಟನೆಗೆ ಸಂಬಂಧಿಸಿದಂತೆ ಐವರು ಗ್ರಾಮಸ್ಥರ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಉತ್ತರಕಾಶಿ ಪೊಲೀಸ್ ವರಿಷ್ಠಾಧಿಕಾರಿ ಅರ್ಪಣ್ ಯದುವಂಶಿ ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಆತನ ಸಂಬಂಧಿಕರು ಮೋರಿ ಪೊಲೀಸ್​ ಠಾಣೆಗೆ ತಲುಪಿ ಗಲಾಟೆ ಕೂಡಾ ನಡೆಸಿದ್ದು, ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು ಎಂದು ವರದಿಯಾಗಿದೆ.

You may also like

Leave a Comment