Legislative Assembly: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗುತ್ತಿದೆ ಎಂದು ವಿಪಕ್ಷಗಳು ಆರೋಪ ಮಾಡಿದೆ. ಈ ವಿಚಾರಕ್ಕೆ ಬಿಜೆಪಿ ಶಾಸಕರು, ಸಮಾಜ ಕಲ್ಯಾಣ ಸಚಿವ ಹೆಚ್ ಸಿ ಮಹಾದೇವಪ್ಪ ಅವರನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ.
ದಲಿತರ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಲಾಗ್ತಿದೆ ಎಂದು ಶಾಸಕ ಸುನಿಲ್ ಕುಮಾರ್ ವಿಷಯ ಪ್ರಸ್ತಾಪನೆ ಮಾಡಿದರು. ದಲಿತರ 13.500 ಕೋಟಿ ಹಣವನ್ನು ಗ್ಯಾರಂಟಿಗಳಿಗೆ ಬಳಕೆ ಮಾಡಲಾಗಿದೆ. ಬಸ್ಸಿನಲ್ಲಿ ಹೋಗುವಂತವರಿಗೆ ಹೇಗೆ ಎಸ್ಸಿ ಎಸ್ಟಿ ಎಂದು ಗುರುತಿಸಿದ್ದೀರಿ. ಈ ಯೋಜನೆ ಹಳ್ಳ ಹಿಡಿಸಿ, ಆ ಜನಾಂಗಕ್ಕೆ ಅನ್ಯಾಯ ಮಾಡಿದವರೇ ನೀವು. ನೀವು ಸಚಿವರಾಗಿಲ್ಲ ಅಂದಿದ್ದರೆ ಈ ಕುರಿತು ಪ್ರಶ್ನೆ ಮಾಡುತ್ತಿರಲಿಲ್ವ? ನಿಮ್ಮಿಂದ ಆ ಸಮಾಜಕ್ಕೆ ಅನ್ಯಾಯ ಆಗ್ತಿದೆಯಲ್ಲ ಎಂದು ಚಂದ್ರಪ್ಪ ಹಾಗೂ ಸುನೀಲ್ ಪ್ರಶ್ನೆ ಕೇಳಿದ್ದಾರೆ.
ನೂರು ಗ್ಯಾರಂಟಿ ಮಾಡಿ, ನಮ್ಮದೇನು ತಕರಾರು ಇಲ್ಲ. ದಲಿತರಿಗೆ ಮೀಸಲಿಟ್ಟ ಹಣದ ಕುರಿತು ಹಣಕಾಸು ಸಚಿವರು ತೀರ್ಮಾನ ಮಾಡಬಾರದು. ಸಮಾಜ ಕಲ್ಯಾಣ ಸಚಿವರು ತೀರ್ಮಾನ ಮಾಡಬೇಕು ಎಂದು ಅಶೋಕ್ ಹೇಳಿದರು.
ಹುಲಿಗಳಿಗೆ ದಲಿತರ ಹಣ ಕೊಟ್ಟಿದ್ದೀರಾ, ಐಬಿಗಳಿಗೂ ದಲಿತರ ಹಣ ಕೊಟ್ಟಿದ್ದೀರಾ, ಹುಲಿಗಳು ಎಸ್ಸಿ ಎಸ್ಟಿ ಅಂತಾ ಇದ್ದಾವಾ? ಇದರ ದಾಖಲೆ ಬೇಕಿದ್ರೆ ನಾನು ಕೊಡ್ತೀನಿ ಎಂದು ವಿಪಕ್ಷ ನಾಯಕ ಹೇಳಿದರು.
ಎಸ್ಸಿಪಿ, ಟಿಎಸ್ಪಿ ಹಣ ಇಟ್ಟಿದ್ದು 42 ಸಾವಿರ ಕೋಟಿ, ಆದರೆ ಬಿಡುಗಡೆ ಆಗಿದ್ದು 8.459 ಕೋಟಿ ಮಾತ್ರ. ಇಷ್ಟು ಕಡಿಮೆ ಹಣ ಕೊಟ್ಟು ಸಮಾಜಕ್ಕೆ ಯಾಕೆ ಮೋಸ ಮಾಡುತ್ತಿದ್ದೀರಾ? ಸಚಿವ ಎಚ್ ಸಿ ಮಹಾದೇವಪ್ಪ ಉತ್ತರ ಕೊಡಿ ಎಂದು ಬಿಜೆಪಿ ಶಾಸಕ ಪಟ್ಟು ಹಿಡಿದಿದ್ದಾರೆ.
