ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು ಎಂಬ ಗಾದೆ ಇದೆ. ಆದರೂ ಅದೆಷ್ಟೋ ಮಂದಿ ಅವಸರದ ನಿರ್ಧಾರ ತೆಗೆದುಕೊಂಡು ದುಡುಕಿ ಜೀವನಪರ್ಯಂತ ಮರೆಯಲಾಗದ ತಪ್ಪನ್ನು ಮಾಡುತ್ತಾರೆ. ಇದಕ್ಕೆ ಸ್ಪಷ್ಟ ಉದಾಹರಣೆ ಈ ಘಟನೆ. ತನ್ನ ಮನೆಗೆ ನುಗ್ಗಿದ್ದು ಅಪರಿಚಿತನೆಂದು ತಪ್ಪಾಗಿ ಭಾವಿಸಿ 16 ವರ್ಷದ ಸ್ವಂತ ಮಗಳನ್ನು ತಂದೆಯೇ ಗುಂಡಿಕ್ಕಿ ಕೊಂದ ಘಟನೆ ಯುನೈಟೆಡ್ ಸ್ಟೇಟ್ ನ ಓಹಿಯೋದಲ್ಲಿ ನಡೆದಿದೆ.
ಓಹಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ 16 ವರ್ಷದ ಮಗಳು ಜಾನೆ ಹೇರ್‍ಸ್ಟನ್ ಅನುಮತಿ ಇಲ್ಲದೆ ನುಗ್ಗಿದ್ದು ಅಪರಿಚಿತನೆಂದು ತಪ್ಪಾಗಿ ಭಾವಿಸಿ ಗುಂಡಿಕ್ಕಿ ಕೊಂದಿದ್ದಾನೆ. ನಂತರ ಅದು ತನ್ನ ಮಗಳು ಎಂದು ತಿಳಿದು ತಂದೆ ಫುಲ್ ಶಾಕ್ ಆಗಿದ್ದಾರೆ. ತಕ್ಷಣ ಜಾನೆ ಹೇರ್‍ಸ್ಟನ್ ತಾಯಿ ತುರ್ತು ಸೇವೆಗೆ ಕರೆ ಮಾಡಿದ್ದಾಳೆ.
ಸ್ಥಳಕ್ಕೆ ಬಂದ ಆಂಬುಲೆನ್ಸ್ ಮೂಲಕ ಹೇರ್‍ಸ್ಟನ್‍ಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಿದ್ದಾಳೆ. ಮಗಳು ಮೃತಪಟ್ಟಿರುವ ಸುದ್ದಿ ತಿಳಿದ ತಕ್ಷಣ ಪೋಷಕರು ದುಃಖದಲ್ಲಿ ಮುಳುಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಈ ವರ್ಷ ಯುನೈಟೆಡ್ ಸ್ಟೇಟ್ಸ್ ನಲ್ಲಿ ಬಂದೂಕು ದಾಳಿಯಿಂದ ಹಲವು ಜನರು ಮೃತಪಟ್ಟಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ರೋಗದ ಆರಂಭದಿಂದಲೂ, ಯುನೈಟೆಡ್ ಸ್ಟೇಟ್ಸ್ ನಲ್ಲಿ ಬಂದೂಕು ಹಿಂಸಾಚಾರ ತೀವ್ರವಾಗಿ ಏರಿದೆ. ಹೀಗಾಗಿ ಬಂದೂಕು ಹೊಂದುವ ಹಕ್ಕುಗಳು ಬೇಕಾ ಎಂಬ ಕುರಿತು ಹೆಚ್ಚು ಚರ್ಚೆಯಾಗುತ್ತಿದೆ.
