2
ವಿಶೇಷ ವರದಿ: ಸಂಧ್ಯಾ ಸೊರಬ
D K Shivakumar: ಹೆಚ್.ಡಿ.ಕುಮಾರಸ್ವಾಮಿ ಸಂಸದರಾದ್ದರಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಆಯೋಗ ದಿನಾಂಕ ಘೋಷಣೆಗೂ ಮೊದಲೇ ರಾಜಕೀಯ ಪಕ್ಷಗಳು ರಣಕಹಳೆ ಊದಿಬಿಟ್ಟಿವೆ.ಕಳೆದ ಬಾರಿ ತ್ರಿಕೋನ ಸ್ಪರ್ಧೆ ಇದ್ದ ಈ ಕ್ಷೇತ್ರಕ್ಕೆ ಜೆಡಿಎಸ್-ಬಿಜೆಪಿ ಮೈತ್ರಿಯಿಂದಾಗಿ ಇದೀಗ ದ್ವಿಕೋನ ಸ್ಪರ್ಧೆ ಏರ್ಪಟ್ಟಿದೆ.ಅದು ಕೂಡ ಪ್ರತಿಷ್ಠೆಯ ಕಣವಾಗಿ ಅಲ್ಲದೇ ವ್ಯಕ್ತಿಗತ ಪ್ರತಿಷ್ಠೆಯ ಜಿದ್ದಾಜಿದ್ದಿಯಾಗಿ.
ಅಷ್ಟಕ್ಕೂ ಡಿಸಿಎಂ ಡಿ.ಕೆ.ಶಿವಕುಮಾರ್ ಚನ್ನಪಟ್ಟಣ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ ಎಂದು ಒತ್ತಿಒತ್ತಿ ಪ್ರತಿ ಭಾಷಣದಲ್ಲೂ ಹೇಳೋದ್ರ ಹಿಂದೆ ರಹಸ್ಯವೇ ಅಡಗಿದೆ.ಹೇಳಿಕೇಳಿ ಚನ್ನಪಟ್ಟಣ ಅನ್ನೋದು ಒಕ್ಕಲಿಗರ ಪಾರುಪತ್ಯದ ಕ್ಷೇತ್ರ.ಹೆಚ್.ಡಿ.ಕುಮಾರಸ್ವಾಮಿ ಹಾಗೂ ಪತ್ನಿ ಅನಿತಾಕುಮಾರಸ್ವಾಮಿ ಈ ಕ್ಷೇತ್ರದಿಂದ ಗೆದ್ದು ಸೈ ಅನಿಸಿಕೊಂಡಿದ್ದಾರೆ.ಅಷ್ಟೇ ಅಲ್ಲ ಇದೇ ಕ್ಷೇತ್ರದಿಂದ ಇದೇ ಸಮುದಾಯದ ಸಿ.ಪಿ.ಯೋಗೇಶ್ವರ್ ಗೆದ್ದು ಸಚಿವರಾಗಿದ್ದವರು. ಈಗ ಸಿಪಿವೈ ಬಿಜೆಪಿಯಿಂದ ಎಂಎಲ್‌ಸಿ ಆಗಿದ್ದರೂ ಕಣ್ಣೆಲ್ಲಾ ಚನ್ನಪಟ್ಟಣ ಉಪಚುನಾವಣೆಯತ್ತವೇ ಆಗಿದೆ.
ಬಿಜೆಪಿಯಿಂದ ಟಿಕೆಟ್ ಬಯಸಿದ್ದರೂ ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ದೆಹಲಿಯ ವರಿಷ್ಠರಾಗಲೀ ರಾಜ್ಯದ ನಾಯಕರಾಗಲೀ ಯೋಗೇಶ್ವರ್ ಸ್ಪರ್ಧೆಗೆ ಒಪ್ಪೇಯಿಲ್ಲ. ಯೋಗೇಶ್ವರ್ ಮನವಿಗೂ ಸದ್ಯ ಕ್ಯಾರೇ ಅಂದಿಲ್ಲ.ಅದಕ್ಕೆ ಕಾರಣವೆಂದರೆ ಅಷ್ಟು ಸುಲಭವಾಗಿ ಹೆಚ್‌ಡಿಕೆ ಇದನ್ನು ಬಿಟ್ಟು ಕೊಡೋದು ಇಲ್ಲ.
ಹೀಗಾಗಿ ಯೋಗೇಶ್ವರ್ ಈಗಾಗಲೇ ಎರಡು ಸುತ್ತು ಕಾಂಗ್ರೆಸ್ ಹೈಕಮಾಂಡ್ ಅನ್ನು ಸುತ್ತು ಬಂದಿದ್ದಾರೆ.ಅಲ್ಲದೇ ಸಿಎಂ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಕೆಲ ಕೈ ನಾಯಕರನ್ನು ಸಹ ಮನವಿ ಮಾಡಿದ್ದಾರೆ.ಈಗಾಗಲೇ ಬೆಂಗಳೂರು ದಕ್ಷಿಣ ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಡಿ.ಕೆ.ಸುರೇಶ್ ಸೋತಿರೋದ್ರಿಂದ ಚನ್ನಪಟ್ಟಣ ಡಿಕೆಗೆ ಅತಿದೊಡ್ಡ ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ.ಎಲ್ಲಿ ಕಾಂಗ್ರೆಸ್ ಯೋಗೇಶ್ವರ್ ಮನವಿಯನ್ನು ಪುರಸ್ಕರಿಸಿ ಚನ್ನಪಟ್ಟಣದ ಉಪಚುನಾವಣೆಗೆ ಸಿ.ಪಿ.ಯೋಗೇಶ್ವರ್ನನ್ನು ಬಿಜೆಪಿಯಿಂದ ತನ್ನತ್ತ ಸೆಳೆದು ಅಭ್ಯರ್ಥಿಯನ್ನಾಗಿ ಘೋಷಿಸಿಬಿಡುತ್ತದೆಯೋ ಎಂಬ ಆತಂಕ,ಮುಂದಾಲೋಚನೆ ಈ ಡಿಕೆದು.
ಇನ್ನು ಡಿ.ಕೆ.ಸುರೇಶ್ ಚನ್ನಪಟ್ಟಣದ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸೋಕೆ ಅಷ್ಟೊಂದು ಮನಸು ಮಾಡಿಲ್ಲ ಎನ್ನಲಾಗಿದೆ.ಹೀಗಾಗಿ ಕ್ಷೇತ್ರ ಕೈತಪ್ಪಬಾರದು, ಸಿಪಿಯೋಗೇಶ್ವರ್ ಕಾಂಗ್ರೆಸ್ ಅಭ್ಯರ್ಥಿ ಆಗಬಾರದು ಎನ್ನುವ ಅಳೆದುತೂಗಿ ಲೆಕ್ಕಾಚಾರದಿಂದಲೇ ಡಿಕೆಶಿ ತಾನೇ ಚನ್ನಪಟ್ಟಣಕ್ಕೆ ಕ್ಯಾಂಡಿಡೇಟು ಅಂತಾ ಹೇಳುತ್ತಿರೋದು.ಆಕಸ್ಮಾತ್ ಈ ಕ್ಷೇತ್ರದಲ್ಲಿ ತಾನು ಗೆದ್ದರೆ ಕನಕಪುರವನ್ನು ಮಗಳು ಐಶ್ವರ್ಯಾಗೋ ಅಥವಾ ಡಿ.ಕೆ.ಸುರೇಶ್‌ಗೆ ಬಿಟ್ಟುಕೊಡೋ ಪ್ಲ್ಯಾನ್ ಡಿ.ಕೆ.ಶಿವಕುಮಾರದ್ದು ಆಗಿದೆ ಎಂದು ಮೂಲಗಳೇ ಹೇಳಿವೆ. (ವಿಶೇಷ ವರದಿ: ಸಂಧ್ಯಾ ಸೊರಬ)
