Udupi: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವದ ಅಮ್ಮನವರ ಗದ್ದುಗೆ ಪ್ರತಿಷ್ಠೆಯ ಕಾರ್ಯಕ್ರಮದಲ್ಲಿ ಇಂದು ಮಾ.02 ರಂದು ಭಾಗಿಯಾಗಿದ್ದು, ಈ ಸಂದರ್ಭದಲ್ಲಿ ಪತ್ನಿ ಉಷಾ ಹೆಸರಿನಲ್ಲಿ 9,99,999 ರೂ.ಗಳ ಚಿನ್ನದ ಕಲಶ ಸೇವೆ ನೀಡಿದರು.
ಮಾರಿಯಮ್ಮನ ಮೊದಲ ಪ್ರಸಾದ ಡಿ.ಕೆ.ಶಿವಕುಮಾರ್ ಅವರಿಗೆ ನೀಡಲಾಯಿತು. ಗುರ್ಮೆ ಸುರೇಶ್ ಶೆಟ್ಟಿ ಅವರು ಸನ್ಮಾನ ಮಾಡಿದರು.
ನಾನು ಭಕ್ತನಾಗಿ ಈ ಕ್ಷೇತ್ರಕ್ಕೆ ಬಂದಿದ್ದೇನೆ. ಡಿಸಿಎಂ ಆಗಿ ಅಲ್ಲ. ಸರಕಾರದ ಬೆಂಬಲವಿಲ್ಲದೇ ಜನರೇ ದೇಗುಲ ಕಟ್ಟಿದ್ದು ನಾನು ಎಲ್ಲೂ ನೋಡಿಲ್ಲ. ನಾನು ಪ್ರಸನ್ನನಾಗಿದ್ದೇನೆ. ದೇವರು ಶಾಪ ಕೊಡಲ್ಲ, ಅವಕಾಶ ಕೊಡ್ತಾನೆ. ಮಾತೃಭೂಮಿ, ಭೂತಾಯಿ, ದೇವಿ ದರ್ಶನ ಮಾಡುವ ಅವಕಾಶ ದೊರಕಿದೆ. ಧರ್ಮ ಉಳಿಸಬೇಕು, ಕಾಪಾಡಬೇಕು. ಯಾವ ಧರ್ಮದಲ್ಲೂ ಯಾರಿಗೂ ತೊಂದರೆ ಕೊಡಬೇಕೆಂದು ಇಲ್ಲ. ದೇಗುಲಕ್ಕೆ ಸೇವೆ ಮಾಡಿದರೆ ದೇವರ ಆಶೀರ್ವಾದ ಇರುತ್ತದೆ. ಭಕ್ತಿ ಇಲ್ಲದೆ ಮನುಷ್ಯ ಬದುಕಲು ಸಾಧ್ಯವಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದರು.
ನಾಡ ದೇವತೆ ಚಾಮುಂಡೇಶ್ವರಿಗೂ ಈ ಕ್ಷೇತ್ರಕ್ಕೂ ಇತಿಹಾಸವಿದೆ. ಕಾಪು ಎಂದರೆ ರಕ್ಷಣಾ ಸ್ಥಳ ಎಂದು ಕೇಳ್ಪಟ್ಟಿದ್ದೆ. ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯ ಎಂದು ಹೇಳುತ್ತಾ ಮಾರಿಯಮ್ಮನ ಮೊದಲ ಪ್ರಸಾದ ಸಿಕ್ಕಿದ್ದು ನಮ್ಮ ಭಾಗ್ಯ ಎಂದು ಹೇಳಿದರು.
