Uppinangady: ಭಗವಂತನ ಸನ್ನಿಧಿಯಲ್ಲಿ ಭಕ್ತಿಗೆ ಜಾತಿ-ಮತದ ಬೇಲಿಗಳಿಲ್ಲ” ಎಂಬುದಕ್ಕೆ ಉಪ್ಪಿನಂಗಡಿಯ (Uppinangady) ಶ್ರೀ ಮಹಾಕಾಳಿ ದೇವಸ್ಥಾನವು ಭಾನುವಾರ ಜೀವಂತ ಸಾಕ್ಷಿಯಾಯಿತು.
ಇಬ್ಬರು ಯುವಕರು ದೇವಸ್ಥಾನ ಕ್ಕೆ ಬಂದು “ನಮ್ಮ ಕುಟುಂಬದಲ್ಲಿ ಮದುವೆ ಕಾರ್ಯವೊಂದು ನಿರ್ವಿಘ್ನವಾಗಿ ನೆರವೇರಲೆಂದು ಮಹಾಕಾಳಿ ದೇವಿಗೆ ಹರಕೆ ಹೊತ್ತಿದ್ದೆವು. ನಮ್ಮ ಪ್ರಾರ್ಥನೆ ಫಲಿಸಿ, ಮದುವೆ ಕಾರ್ಯ ಯಶಸ್ವಿಯಾಗಿ ನೆರವೇರಿದೆ. ಹರಕೆಯನ್ನು ಹೇಗೆ ತೀರಿಸಬೇಕೆಂಬ ಬಗ್ಗೆ ಗೊಂದಲದಲ್ಲಿದ್ದಾಗ, ದೇವಸ್ಥಾನದ ಅರ್ಚಕರ ಸಲಹೆಯಂತೆ, ಇಲ್ಲಿ ತೆಂಗಿನಕಾಯಿ ಒಡೆದು ನಮ್ಮ ಕೃತಜ್ಞತಾಪೂರ್ವಕ ಹರಕೆಯನ್ನು ತೀರಿಸಿದ್ದೇವೆ” ಎಂದು ಅಲ್ಲಿದ್ದ ಭಕ್ತರಲ್ಲಿ ವಿವರಿಸಿದ್ದಾರೆ.
ವಿಶೇಷವೆಂದರೆ, ಅವರು ಒಡೆದ ಪ್ರತಿಯೊಂದು ತೆಂಗಿನಕಾಯಿಯೂ ಮೇಲ್ಮುಖವಾಗಿಯೇ ಬಿದ್ದಿತು. ಧಾರ್ಮಿಕ ನಂಬಿಕೆಯ ಪ್ರಕಾರ, ತೆಂಗಿನಕಾಯಿ ಈ ರೀತಿ ಒಡೆದು ಮೇಲ್ಮುಖವಾಗಿ ಬಿದ್ದರೆ, ದೇವರು ಭಕ್ತರ ಪ್ರಾರ್ಥನೆಯನ್ನು ಸ್ವೀಕರಿಸಿ, ಹರಕೆ ಈಡೇರಿದೆ ಎಂಬುದರ ಸಂಕೇತವೆಂದು ಭಾವಿಸಲಾಗುತ್ತದೆ. ಈ ದೃಶ್ಯ ಯುವಕರ ಮುಖದಲ್ಲಿ ಸಂತೃಪ್ತಿಯ ಭಾವ ಮೂಡಿಸಿತು.
ಉಪ್ಪಿನಂಗಡಿಯ ಮಹಾಕಾಳಿ ದೇಗುಲದಲ್ಲಿ ನಡೆದ ಈ ಸೌಹಾರ್ದಯುತ ಪ್ರಸಂಗವು ಸಮಾಜಕ್ಕೆ ಸಕಾರಾತ್ಮಕ ಸಂದೇಶವನ್ನು ರವಾನಿಸಿದೆ.
