ಧರ್ಮಸ್ಥಳ ಪ್ರವಾಸಕ್ಕೆ ತೆರಳಿ ಮರಳುವಾಗ ಕೆಎಸ್‌ಆರ್‌ಟಿಸಿ ಬಸ್ ಬದಲಾವಣೆಯ ಗೊಂದಲದಿಂದ ತಾಯಿಯಿಂದ ಬೇರ್ಪಟ್ಟಿದ್ದ ಕೋಲಾರದ ಬಾಲಕಿಯನ್ನು ಪೊಲೀಸರು ಹಾಗೂ ಸಾರ್ವಜನಿಕರು ಸುರಕ್ಷಿತವಾಗಿ ಅಮ್ಮನ ಮಡಿಲು ಸೇರಿಸಿದ್ದಾರೆ.
ಕೋಲಾರ ಮೂಲದ ಮಹಿಳೆ ಹಾಗೂ ಅವರ ಮಗಳು ಸೇರಿದಂತೆ ಆರು ಜನರ ತಂಡ ಧರ್ಮಸ್ಥಳ ಪ್ರವಾಸಕ್ಕೆ ತೆರಳಿತ್ತು. ಸಕಲೇಶಪುರ ತಾಲೂಕಿನ ಬಾಗೆ ಗ್ರಾಮದ ಬಳಿ ಇವರು ಪ್ರಯಾಣಿಸುತ್ತಿದ್ದ ಬಸ್ ತಾಂತ್ರಿಕ ದೋಷದಿಂದ ಕೆಟ್ಟು ನಿಂತಿತ್ತು. ಈ ವೇಳೆ ಬಸ್ ನಿರ್ವಾಹಕರು ಪ್ರಯಾಣಿಕರನ್ನು ಮತ್ತೊಂದು ಬಸ್ಸಿಗೆ ಹತ್ತಿಸಿದ್ದರು. ತಾಯಿ ಹಾಗೂ ಉಳಿದವರು ಒಂದು ಬಸ್ ಹತ್ತಿದರೆ, 3ನೇ ತರಗತಿ ವಿದ್ಯಾರ್ಥಿನಿಯಾದ ಬಾಲಕಿ ಮಾತ್ರ ಕೆಟ್ಟು ನಿಂತಿದ್ದ ಬಸ್ಸನ್ನೇ ಹತ್ತಿದ್ದಾಳೆ. ಬಸ್ ದುರಸ್ತಿಯಾದ ನಂತರ ಆ ಬಸ್ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದಾಗ ಬಾಲಕಿ ಒಬ್ಬಳೇ ಇರುವುದನ್ನು ಗಮನಿಸಿದ ಸಹ ಪ್ರಯಾಣಿಕರು ಗ್ರಾಮಾಂತರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಾರ್ಯಪ್ರವೃತ್ತರಾದ ಗ್ರಾಮಾಂತರ ಪಿಎಸ್ ಪ್ರಸನ್ನ ಬಾಲಕಿಯ ಬಳಿ ತಾಯಿಯ ಮೊಬೈಲ್ ಸಂಖ್ಯೆ ಪಡೆದು ಸಂಪರ್ಕಿಸಿದರು. ಆಗ ಬಾಲಕಿಯ ತಾಯಿ ಮತ್ತು ಉಳಿದವರು ಅಷ್ಟರಲ್ಲಾಗಲೇ ಹಾಸನ ಸಮೀಪ ತಲುಪಿದ್ದರು. ನಂತರ ಸಾರ್ವಜನಿಕರ ಸಹಕಾರ ಪಡೆದು ಬಾಲಕಿಯನ್ನು ತಾಯಿ ಜೊತೆ ಸೇರಿಸಿದರು.
