Belthangady: ಧರ್ಮಸ್ಥಳದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಮಾಸ್ಕ್‌ಮ್ಯಾನ್‌ಗೆ ಆಶ್ರಯ ನೀಡಿದ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ನಿವಾಸದ ಮೇಲೆ ಆ.26 ರಂದು ಬೆಳಗ್ಗೆ 9.20ಗಂಟೆಗೆ ಎಸ್‌ಐಟಿ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಬೆಳ್ತಂಗಡಿ ನ್ಯಾಯಾಧೀಶರಿಂದ ಆ.25 ರಂದು ಸರ್ಚ್ ವಾರಂಟ್ ಪಡೆದು ಆರೋಪಿಯನ್ನು ಜೊತೆಯಲ್ಲಿ ಕರೆದುಕೊಂಡು ಬಂದು ದಾಳಿ ಮಾಡಿ ಪರಿಶೀಲನೆ ಮಾಡುತ್ತಿರುವ ಕುರಿತು ವರದಿಯಾಗಿದೆ.
ಮಹೇಶ್ ಶೆಟ್ಟಿ ತಿಮರೋಡಿ ಕಳೆದ ಎರಡು ತಿಂಗಳಿನಿಂದ ಬುರುಡೆ ಪ್ರಕರಣದ ಆರೋಪಿ ಮಾಸ್ಕ್‌ಮ್ಯಾನ್‌ಗೆ ಆಶ್ರಯ ನೀಡಿರುವುದಾಗಿ ಹೇಳಲಾಗಿದ್ದು, ಆರೋಪಿಗೆ ಸಂಬಂಧಪಟ್ಟ ವಸ್ತುಗಳನ್ನು ವಶಪಡಿಸಿಕೊಳ್ಳಲು ಈ ದಾಳಿ ಮಾಡಲಾಗಿದೆ ಎಂದು ವರದಿಯಾಗಿದೆ.
ಮಾಸ್ಕ್‌ಮ್ಯಾನ್‌ನನ್ನು ಇಂದು ಎಸ್‌ಐಟಿ ತಂಡ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರ ನಿವಾಸಕ್ಕೆ ಕರೆತಂದು ಮಹಜರು ಪ್ರಕ್ರಿಯೆ ನಡೆಸಿದೆ. ಈ ಸಂದರ್ಭದಲ್ಲಿ ತಿಮರೋಡಿ ಮನೆಯ ಸುತ್ತಮುತ್ತ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಾಡು ಮಾಡಲಾಗಿತ್ತು.
ಮಾಸ್ಕ್‌ಮ್ಯಾನ್ ತಾನು ತಿಮರೋಡಿ ಮನೆಯಲ್ಲಿ ಆಶ್ರಯ ಪಡೆದಿದ್ದಾಗಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.
ಮಹಜರು ಪ್ರಕ್ರಿಯೆ ನಡೆಯುತ್ತಿದ್ದ ಕಾರಣ, ತಿಮರೋಡಿ ನಿವಾಸದ ಸುಮಾರು ಎರಡು ಕಿ.ಮೀ. ದೂರದಲ್ಲಿಯೇ ಪೊಲೀಸರು ಮಾಧ್ಯಮ ಪ್ರತಿನಿಧಿಗಳನ್ನು ತಡೆಯಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಭದ್ರತೆ ಕಲ್ಪಿಸಲಾಗಿದೆ ಎಂದು ವರದಿಯಾಗಿದೆ.
