Dharmasthala Case: ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ಪ್ರಮುಖ ಸಾಕ್ಷಿ-ದೂರುದಾರನಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ವಿಶೇಷ ತನಿಖಾ ತಂಡದ (ಎಸ್‌ಐಟಿ) ಪೊಲೀಸ್ ಅಧಿಕಾರಿ ಮಂಜುನಾಥ ಗೌಡ ಅವರ ಮೇಲೆ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಇಂದು ಆತನನ್ನು ಉತ್ಖನನ ಕಾರ್ಯಕ್ಕೆ ಬರದಂತೆ ದೂರವಿಟ್ಟಿತ್ತಾ ಅನ್ನೋ ಮಾತುಗಳು ಕೇಳಿ ಬಂದಿದೆ.
ತನಿಖೆಯಲ್ಲಿ ಸಾರ್ವಜನಿಕರ ನಂಬಿಕೆಯನ್ನು ಅಲುಗಾಡಿಸಬಹುದಾದ ಆಘಾತಕಾರಿ ಬೆಳವಣಿಗೆ ನಡೆದಿತ್ತು. ಶುಕ್ರವಾರ (ಆಗಸ್ಟ್ 1) ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೂಲ ಪೊಲೀಸ್ ದೂರನ್ನು ಹಿಂಪಡೆಯುವಂತೆ ಅಧಿಕಾರಿ ದೂರುದಾರರ ಮೇಲೆ ಒತ್ತಡ ಹೇರಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಆಗಿರುವ ಗೌಡ, ಬೆಳ್ತಂಗಡಿಯಲ್ಲಿರುವ ಎಸ್‌ಐಟಿ ಶಿಬಿರದಲ್ಲಿ ತಮ್ಮ ಮೊಬೈಲ್ ಫೋನ್‌ನಲ್ಲಿ ಹೇಳಿಕೆಯನ್ನು ರೆಕಾರ್ಡ್ ಮಾಡುವಾಗ, ದೂರನ್ನು ಹಿಂಪಡೆಯಲು ಇಚ್ಛಿಸುತ್ತೇನೆ ಎಂದು ಸುಳ್ಳು ಹೇಳಿಕೆ ನೀಡುವಂತೆ ಭೀಮಾ (ದೂರಿನಲ್ಲಿ ‘X’ ಎಂದು ಉಲ್ಲೇಖಿಸಲಾಗಿದೆ) ಅವರನ್ನು ಒತ್ತಾಯಿಸಿದ ಆರೋಪವೂ ಇದೆ.
ಮಂಜುನಾಥ್ ಮೇಲೆ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಎಸ್‌ಐಟಿ ತಂಡವೇ ಮಂಜುನಾಥ್‌ರನ್ನು ದೂರವಿಟ್ಟಿದೆಯೇ ಎನ್ನುವ ಕುರಿತು ವರದಿಯಾಗಿದೆ. ಇನ್ಸ್‌ಪೆಕ್ಟರ್ ಮಂಜುನಾಥ್ ಅವರ ವಿರುದ್ಧ ದೂರು ಕೇಳಿ ಬಂದ ಕಾರಣ ಎಸ್‌ಐಟಿ ತಂಡ ಇಂದು ಮಂಜುನಾಥ್ ದೂರವಿಟ್ಟಿದ್ದು, ಪ್ರಕರಣದ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ, ಪುತ್ತೂರು ಎಸಿ ಸ್ಟೆಲ್ಲಾ ವರ್ಗಿಸ್ ಒಳಗೊಂಡ ಅಧಿಕಾರಿಗಳ ತಂಡ ಸ್ಥಳದಲ್ಲಿ ಹಾಜರಿದೆ.
