Udupi: ಕನ್ನಡ ಬಿಗ್‌ಬಾಸ್ ಸೀಸನ್ 11 ರ ಸ್ಪರ್ಧಿ ಚೈತ್ರಾ ಕುಂದಾಪುರ ಮೇ 09, 2025 ರಂದು ಕಮಲಶಿಲೆಯ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ಶ್ರೀಕಾಂತ್ ಕಶ್ಯಪ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಅವರ ತಂದೆ ಬಾಲಕೃಷ್ಣ ನಾಯ್ಕ್ ತಮ್ಮ ಮಗಳ ಮದುವೆಯ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಜೊತೆಗೆ ಚೈತ್ರಾ ಮತ್ತು ಆಕೆಯ ಕುಟುಂಬದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಚೈತ್ರಾ ನನ್ನನ್ನು ಕರೆದಿಲ್ಲ, ನಾನೂ ಮದುವೆಗೆ ಹೋಗಿಲ್ಲ. ಈ ಮದುವೆಯನ್ನು ನಾನು ಒಪ್ಪಲಾರೆ’ ಎಂದಿದ್ದಾರೆ. ಇದಲ್ಲದೆ ಚೈತ್ರಾ ಮತ್ತು ಆಕೆಯ ಪತಿ ಶ್ರೀಕಾಂತ್ ಕಶ್ಯಪ್ ಇಬ್ಬರನ್ನೂ ‘ಕಳ್ಳರು’ ಎಂದು ಕರೆದು, ಅವರಿಗೆ ‘ಮಾನ-ಮರ್ಯಾದೆ ಇಲ್ಲ. ಚೈತ್ರ ಮದುವೆ ಸಂದರ್ಭ ನನ್ನಲ್ಲಿ ಹಣ ಕೇಳಿದಳು. ನಾನು ಹೋಟೆಲ್ ನಲ್ಲಿ ಕೆಲಸ ಮಾಡುವ ಸಾಮಾನ್ಯ ನೌಕರ. ಹಣ ಕೊಡಲಾಗಿಲ್ಲ.. ಹೀಗಾಗಿ ನನ್ನನ್ನು ದೂರವಿಟ್ಟಿದ್ದಾರೆ.. ಚೈತ್ರಾ ಮತ್ತು ನನ್ನ ಪತ್ನಿ ಹಣದ ಆಸೆಗಾಗಿ ನನ್ನನ್ನು ದೂರವಿಟ್ಟಿದ್ದಾರೆ. ನಾನು ಕಟ್ಟಿದ ಮನೆಯಲ್ಲಿ ಈಗ ನಾನೇ ಅನಾಥನಾಗಿದ್ದೇನೆ’ ಎಂದು ಬಾಲಕೃಷ್ಣ ನಾಯ್ಕ್ ಭಾವುಕರಾಗಿ ಹೇಳಿದ್ದಾರೆ ಎಂದು ಎಷ್ಯಾನೆಟ್ ವರದಿ ಮಾಡಿದೆ.
ಗೋವಿಂದ ಬಾಬು ಪೂಜಾರಿ ಪ್ರಕರಣದ ಬಗ್ಗೆಯೂ ಮಾತನಾಡಿರುವ ಬಾಲಕೃಷ್ಣ ನಾಯ್ಕ್, ಮಗಳು ಚೈತ್ರಾ ಕುಂದಾಪುರ ಹಣ ಹಂಚಿಕೊಂಡಿದ್ದಾರೆ . ಪಡ್ಡೆ ಹುಡುಗರ ಹೆಸರಿನಲ್ಲಿ ಬೇರೆ ಬೇರೆ ಬ್ಯಾಂಕುಗಳಲ್ಲಿ ಡೆಪಾಸಿಟ್ ಇಟ್ಟಿದ್ದಳು. ಬಾಂಡ್ ಮೇಲೆ ಸಾಲ ಪಡೆದಿದ್ದಳು ಎಂದು ಅವರು ಆರೋಪಿಸಿದ್ದಾರೆ. ಇದರ ಜೊತೆಗೆ, ಚೈತ್ರಾ ತನ್ನ ಸ್ವಂತ ಹಣದಿಂದ ಸೈನಿಕರಿಗೆ ಸಹಾಯ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾಳೆ ಆದರೆ ಮೋಸದ ಹಣದಿಂದ ಕೊಟ್ಟರೆ ಅದರಿಂದ ಏನು ಪ್ರಯೋಜನ? ಎಂದು ಪ್ರಶ್ನಿಸಿದ್ದಾರೆ.
