Bengaluru : ಫರಂಗಿಪೇಟೆಯ ಪಿಯುಸಿ ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಯಾದ್ಯಂತ ಸಂಚಲನ ಸೃಷ್ಟಿಸಿದೆ. ವಿದ್ಯಾರ್ಥಿ ನಾಪತ್ತೆಯಾಗಿ ವಾರಗಳು ಕಳೆಯುತ್ತಾ ಬಂದರೂ ಕೂಡ ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ಇದೀಗ ಈ ಬೆನ್ನಲ್ಲೇ ವಿದ್ಯಾರ್ಥಿ ಪತ್ತೆಗಾಗಿ ರಾಜ್ಯ ಸರ್ಕಾರ ಏಳು ಪೊಲೀಸ್ ತಂಡಗಳನ್ನು ರಚಿಸಿದೆ.
ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಪರಂಗಿಪೇಟೆಯ ದಿಗಂತ್ ಎಂಬ ಪಿಯುಸಿ ವಿದ್ಯಾರ್ಥಿ ಫೆಬ್ರವರಿ 25 ರಿಂದ ನಾಪತ್ತೆಯಾಗಿದ್ದು, ಈ ವಿಚಾರವನ್ನು ಬುಧವಾರ ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಸ್ಪೀಕರ್ ಯು.ಟಿ. ಖಾದರ್ ಪ್ರಸ್ತಾಪಿಸಿದರು. ನಾಪತ್ತೆ ಪ್ರಕರಣದ ತನಿಖೆಯನ್ನು ಪರಿಶೀಲಿಸುವಂತೆ ಸರ್ಕಾರಕ್ಕೆ ಸೂಚಿಸಿದರು.
ಇದಕ್ಕೆ ಗೃಹ ಸಚಿವ ಜಿ. ಪರಮೇಶ್ವರ ಅವರ ಪರವಾಗಿ ಉತ್ತರಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಫೆಬ್ರವರಿ 25 ರಂದು, ತನ್ನ ಹಾಲ್ ಟಿಕೆಟ್ ಪಡೆಯಲು ಕಾಲೇಜಿಗೆ ಹೋಗಿದ್ದ ವಿದ್ಯಾರ್ಥಿ, ನಂತರ ಮನೆಗೆ ಮರಳಿಲ್ಲ. ತನ್ನ ಕುಟುಂಬ ಸದಸ್ಯರಿಗೆ ದೇವಸ್ಥಾನಕ್ಕೆ ಹೋಗುತ್ತಿರುವುದಾಗಿ ದಿಗಂತ್ ತಿಳಿಸಿದ್ದರು. ಅಂದಿನಿಂದ ವಿದ್ಯಾರ್ಥಿ ಕಾಣೆಯಾಗಿದ್ದು, ಪೊಲೀಸರಿಗೆ ಆತನ ಮೊಬೈಲ್ ಫೋನ್ ಸಿಕ್ಕಿದೆ. ಆದರೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದರು. ಹೀಗಾಗಿ ಪೊಲೀಸ್ ತಂಡ ರಚಿಸಿ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.
