ಉತ್ಸವವೊಂದರ ವೇಳೆ ಡಿಜೆ ಕಾರಿನ ಮೇಲೆ ಡ್ಯಾನ್ಸ್ ಮಾಡುತ್ತಿದ್ದ ಸಂದರ್ಭದಲ್ಲಿ ಏಳು ಮಂದಿಗೆ ವಿದ್ಯುತ್ ಸ್ಪರ್ಶವಾಗಿ, ಈ ಘಟನೆಯಲ್ಲಿ ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಐವರು ಆಸ್ಪತ್ರೆಗೆ ದಾಖಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.
ಈ ಘಟನೆ ಮಧ್ಯಪ್ರದೇಶದ ಇಂದೋರ್ ಬಳಿ ಉತ್ಸವದ ವೇಳೆ ನಡೆದಿದೆ. ಡಿಜೆ ಕಾರಿನ ಮೇಲೆ ಹತ್ತಿ ನೃತ್ಯ ಮಾಡುತ್ತಿದ್ದ ಸಂದರ್ಭದಲ್ಲಿ 11,000 ವೋಲ್ಟೇಜ್ ವಿದ್ಯುತ್ ಪ್ರವಹಿಸುತ್ತಿದ್ದ ಹೈ-ಟೆನ್ಷನ್ ತಂತಿ ಇದ್ದಕ್ಕಿದ್ದಂತೆ ಒಬ್ಬರಿಗೆ ತಗುಲಿ ದುರಂತ ಸಂಭವಿಸಿದೆ.
ಶೀಘ್ರದಲ್ಲೇ ಇನ್ನೊಬ್ಬ ವ್ಯಕ್ತಿ ಮೂರ್ಛೆ ತಪ್ಪಿ ಮತ್ತು ಒಬ್ಬೊಬ್ಬರಾಗಿ, ವಿದ್ಯುತ್ ಆಘಾತಕ್ಕೆ ಒಳಗಾಗಿ ಮತ್ತು ವಾಹನದಿಂದ ಕೆಳಗೆ ಬಿದ್ದಿದ್ದಾರೆ. ಆಗ ಒಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಇನ್ನೊಬ್ಬರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
“ಗಂಭೀರ ಸ್ಥಿತಿಯಲ್ಲಿರುವ ಇಬ್ಬರು ಗಾಯಾಳುಗಳು ಇಂದೋರ್ನ ಮಹಾರಾಜ ಯಶವಂತರಾವ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನಿಬ್ಬರನ್ನು ಮಧ್ಯಪ್ರದೇಶದ ಡಾ.ಅಂಬೇಡ್ಕರ್ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಭಗವಂತ್ ಸಿಂಗ್ ತಿಳಿಸಿದ್ದಾರೆ
