DK Shivakumar: ಡಿಸಿಎಂ ಡಿ.ಕೆ. ಶಿವಕುಮಾರ್‌ಅವರ ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಪ್ರಕರಣದ ವಿಚಾರಣೆಯನ್ನು ಬುಧವಾರ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ಅಫಿಡವಿಟ್‌ನಲ್ಲಿ ದೋಷ ಕಂಡು ಬಂದ ಕಾರಣ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದೆ.
ಪ್ರಕರಣದ ತನಿಖೆಯನ್ನು ಸಿಬಿಐನಿಂದ ಲೋಕಾಯುಕ್ತಕ್ಕೆ ವಹಿಸಿದ್ದ ಕರ್ನಾಟಕ ಸರ್ಕಾರದ ನಡೆ ಪ್ರಶ್ನಿಸಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಬಳಿಕ ಸಿಬಿಐ ಕೂಡ ಸುಪ್ರೀಂ ಕೋರ್ಟ್‌ಗೆ ಈ ಸಂಬಂಧ ಅರ್ಜಿ ಸಲ್ಲಿಸಿದೆ. ಬುಧವಾರ ಪ್ರಕರಣ ವಿಚಾರಣೆಗೆ ಬಂದಾಗ ಸರ್ಕಾರದ ಪರವಾಗಿ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಹೊಸ ಅಫಿಡವಿಟ್ ಸಲ್ಲಿಕೆ ಮಾಡಲು ಸಮಯ ಕೋರಲಾಯಿತು.
ಕರ್ನಾಟಕ ಸರ್ಕಾರದಿಂದ ಹೊಸ ಅಫಿಡವಿಟ್ ಸಲ್ಲಿಕೆ ಮಾಡಲು ಎರಡು ವಾರಗಳ ಅವಕಾಶ ನೀಡಿ ವಿಚಾರಣೆ ಮುಂದೂಡಲಾಯಿತು. ಕರ್ನಾಟಕ ಸರ್ಕಾರದ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಹಾಜರಾಗಿದ್ದರು.
