ಮೇರಠ: ಮಗುವಿನ ತಲೆ ಗಾಯಕ್ಕೆ ಹೊಲಿಗೆ ಹಾಕುವ ಬದಲು ವೈದ್ಯರೊಬ್ಬರು ಫೆವಿಕ್ವಿಕ್ ಬಳಸಿದ ಆಘಾತಕಾರಿ ವಿಚಿತ್ರ ಘಟನೆ ಉತ್ತರಪ್ರದೇಶದ ಮೇರಠನಲ್ಲಿ ನಡೆದಿದೆ.
ಘಟನೆಯ ಬೆನ್ನಲ್ಲೇ ಮಗುವಿನ ಹೆತ್ತವರು ವೈದ್ಯನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಗುವಿನ ತಂದೆ ಜಸ್ಪಿಂದರ್ ಸಿಂಗ್ ಮಗುವಿನ ಹಣೆಗೆ ಗಾಯವಾಗಿದ್ದ ಕಾರಣ ಅಲ್ಲಿನ ಭಾಗ್ಯಶ್ರೀ ಆಸ್ಪತ್ರೆಗೆ ಮಗುವನ್ನು ಕರೆದೊಯ್ದಿದ್ದರು.
ಅಲ್ಲಿ ಮಗುವಿಗೆ ಚಿಕಿತ್ಸೆ ನೀಡಲು ಮುಂದಾದ ವೈದ್ಯ, ಹೆತ್ತವರಿಗೆ ಫೆವಿಕ್ವಿಕ್ ತರಲು ಹೇಳಿದ್ದು, ಬಳಿಕ ಅದನ್ನು ಗಾಯಕ್ಕೆ ಹಚ್ಚಿದ್ದಾರೆ ಎಂದು ಜಸ್ಪಿಂದರ್ ದೂರಿನಲ್ಲಿ ತಿಳಿಸಿದ್ದಾರೆ. ಮಗು ನೋವಿನಿಂದ ನರಳುತ್ತಿದ್ದ ಕಾರಣ ನಂತರ ಬೇರೊಂದು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿನ ವೈದ್ಯರು 3 ಗಂಟೆ ಪರಿಶ್ರಮ ಪಟ್ಟು ಗಾಯದಲ್ಲಿದ್ದ ಫೆವಿಕ್ವಿಕ್ ತೆಗೆದಿದ್ದಾರೆ. ನoತರ ಮಗು ಚೇತರಿಸಿಕೊಂಡಿದೆ.
