Puttur: ಮಾದಕ ದ್ರವ್ಯ ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದ ಇಬ್ಬರು ಯುವಕರನ್ನು ಪುತ್ತೂರು ನಗರ ಠಾಣಾ ಪೊಲೀಸರು ಜೂ 1 ರಂದು ಪುತ್ತೂರು ನಗರದ ದರ್ಬೆ ಎಂಬಲ್ಲಿ ವಶಕ್ಕೆ ಪಡೆದಿದ್ದಾರೆ.
ಪುತ್ತೂರು (Puttur) ಕೆಮ್ಮಿಂಜೆ ಗ್ರಾಮದ ನಿವಾಸಿ ಸಜ್ವಾನ್ (30 ವರ್ಷ) ಹಾಗೂ ಬೆಳ್ತಂಗಡಿ ತಾಲೂಕು ತೆಕ್ಕಾರು ಗ್ರಾಮದ ನಿವಾಸಿ ಮೊಹಮ್ಮದ್ ಅರ್ಷದ್ (19 ವರ್ಷ) ಆರೋಪಿಗಳು.
ಪುತ್ತೂರು ನಗರ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಆಂಜನೇಯ ರೆಡ್ಡಿ ಜಿ.ವಿ. ಅವರು ಕರ್ತವ್ಯದಲ್ಲಿದ್ದಾಗ, ಪುತ್ತೂರು ತಾಲೂಕಿನ ಕಸಬಾ ಗ್ರಾಮದ ದರ್ಬೆ ಬಳಿ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಇಬ್ಬರು ವ್ಯಕ್ತಿಗಳು ಅನುಚಿತವಾಗಿ ವರ್ತಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿದೆ. ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಇಬ್ಬರು ಯುವಕರು ಅನುಮಾನಾಸ್ಪದವಾಗಿ ವರ್ತಿಸುತ್ತಿರುವುದು ಕಂಡುಬಂದಿದೆ.
ಕೂಡಲೇ ಅವರನ್ನು ಹೆಚ್ಚಿನ ವೈದ್ಯಕೀಯ ಪರೀಕ್ಷೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ವೈದ್ಯಾಧಿಕಾರಿಗಳು ನಡೆಸಿದ ಪರೀಕ್ಷೆಯಲ್ಲಿ ಇಬ್ಬರೂ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
