Earthquake: ಅಮೆರಿಕದ ಅಲಾಸ್ಕಾ ರಾಜ್ಯದಲ್ಲಿ ಭಾರತೀಯ ಕಾಲಮಾನದ ಪ್ರಕಾರ ಗುರುವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ 7.3 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ನಂತರ, ದಕ್ಷಿಣ ಅಲಾಸ್ಕಾ ಮತ್ತು ಅಲಾಸ್ಕಾ ಪರ್ಯಾಯ ದ್ವೀಪಕ್ಕೆ ಸುನಾಮಿ ಎಚ್ಚರಿಕೆ ನೀಡಲಾಗಿದೆ. ವರದಿಗಳ ಪ್ರಕಾರ, ಸುನಾಮಿ ಎಚ್ಚರಿಕೆಯ ಮಧ್ಯೆ, ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಆಡಳಿತವು ಕೇಳಿಕೊಂಡಿದೆ.
ರಾಷ್ಟ್ರೀಯ ಸುನಾಮಿ ಎಚ್ಚರಿಕೆ ಕೇಂದ್ರದ ಪ್ರಕಾರ, “ಜುಲೈ 16 ರಂದು ಮಧ್ಯಾಹ್ನ 12:38 AKDT ಕ್ಕೆ ಅಲಾಸ್ಕಾದ ಸ್ಯಾಂಡ್ ಪಾಯಿಂಟ್‌ನಿಂದ 50 ಮೈಲು ದಕ್ಷಿಣದಲ್ಲಿ M7.2 ಭೂಕಂಪ ಸಂಭವಿಸಿದ ನಂತರ ಅಲಾಸ್ಕಾದ ಕೆಲವು ಭಾಗಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಸುನಾಮಿ ಎಚ್ಚರಿಕೆಯು ಕೋಲ್ಡ್ ಬೇ, ಸ್ಯಾಂಡ್ ಪಾಯಿಂಟ್ ಮತ್ತು ಕೊಡಿಯಾಕ್ ಅನ್ನು ಒಳಗೊಂಡಿದೆ, ಆದರೆ ಆಂಕಾರೇಜ್‌ಗೆ ವಿಸ್ತರಿಸುವುದಿಲ್ಲ ಎಂದು ಹೇಳಿದೆ.
“ರಾಷ್ಟ್ರೀಯ ಹವಾಮಾನ ಇಲಾಖೆ ಸುನಾಮಿ ಎಚ್ಚರಿಕೆ ನೀಡಿದೆ. ಕರಾವಳಿಯ ಮೇಲೆ ಪ್ರಬಲವಾದ ಅಲೆಗಳು ಮತ್ತು ಬಲವಾದ ಪ್ರವಾಹಗಳು ಪರಿಣಾಮ ಬೀರಬಹುದು. ಕರಾವಳಿಯ ಜನರು ಅಪಾಯದಲ್ಲಿದ್ದೀರಿ. ಕರಾವಳಿ ನೀರಿನಿಂದ ದೂರವಿರಿ. ಈಗಲೇ ಎತ್ತರದ ಪ್ರದೇಶ ಅಥವಾ ಒಳನಾಡಿಗೆ ತೆರಳಿ. ಸ್ಥಳೀಯ ಅಧಿಕಾರಿಗಳು ನಿಮ್ಮ ಮೂಲ ಸ್ಥಳಗಳಿಗೆ ಮತ್ತೆ ಹಿಂತಿರುಗಬಹುದು ಎಂದು ಹೇಳುವವರೆಗೆ ಕರಾವಳಿಯಿಂದ ದೂರವಿರಿ” ಎಂದು ನಿವಾಸಿಗಳಿಗೆ ತುರ್ತು ಎಚ್ಚರಿಕೆ ನೀಡಲಾಗಿದೆ.
ಯುಎಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್‌ಜಿಎಸ್) ವರದಿ ಪ್ರಕಾರ, ಸ್ಯಾಂಡ್ ಪಾಯಿಂಟ್‌ನಿಂದ ದಕ್ಷಿಣಕ್ಕೆ 87 ಕಿಲೋಮೀಟರ್ ದೂರದಲ್ಲಿ 20 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ. ಬುಧವಾರ ಸಂಜೆ 4:37 ಕ್ಕೆ EDT ಯಲ್ಲಿ ಇದು ದಾಖಲಾಗಿದೆ.
