Bird Flu: ರಾಜ್ಯದಲ್ಲಿ ಹಕ್ಕಿ ಜ್ವರ ತಾಂಡವ ಮಾಡುತ್ತಿದ್ದು ಚಿಕನ್ ಪ್ರಿಯರು ಆತಂಕದಲ್ಲಿದ್ದಾರೆ. ಕೆಲವರು ಕೋಳಿ ಮಾಂಸವನ್ನು ಖರೀದಿ ಮಾಡುವುದನ್ನೇ ಬಿಟ್ಟಿದ್ದಾರೆ. ಆದರೆ ಈ ಬೆನ್ನಲ್ಲೇ ಪಶುಪಾಲನೆ ಮತ್ತು ಅಶೋ ವೈದ್ಯಕೀಯ ಇಲಾಖೆಯು ಸ್ಪಷ್ಟೀಕರಣವನ್ನು ನೀಡಿದ್ದು ಕೋಳಿ ಮಾಂಸ, ಮೊಟ್ಟೆ ಸೇವಿಸಿದರೆ ಹಕ್ಕಿ ಜ್ವರ ಬರುವುದಿಲ್ಲ ಎಂದು ತಿಳಿಸಿದೆ.
ಇಲಾಖೆಯಿಂದ ಈ ಕುರಿತು ಮಾರ್ಗಸೂಚಿಯನ್ನು ಹೊರಡಿಸಲಾಗಿದ್ದು ಸೋಂಕಿತ ಕೋಳಿ ಮಾಂಸವನ್ನು ಚೆನ್ನಾಗಿ ಬೇಯಿಸದೆ, ಅವುಗಳ ಹಸಿ ಮೊಟ್ಟೆಯ ಸೇವನೆಯಿಂದ ರೋಗ ತಗಲುವ ಸಾಧ್ಯತೆಗಳಿವೆ. ಆದರೆ, ಕೋಳಿ ಮಾಂಸ ಮತ್ತು ಮೊಟ್ಟೆಯನ್ನು 70 ಡಿಗ್ರಿ ಸೆಂಟಿಗ್ರೇಡ್ ಗೂ ಅಧಿಕ ಉಷ್ಣಾಂಶದಲ್ಲಿ ಬೇಯಿಸಿ ತಿನ್ನಬಹುದು. ಕೋಳಿ ಮಾಂಸವನ್ನು ಸಿದ್ಧಪಡಿಸಿದ ನಂತರ ಕೈಗಳನ್ನು ನಂಜು ನಾಶಕದಿಂದ ತೊಳೆಯಬೇಕು. ಹಕ್ಕಿ ಜ್ವರ ಸಾಂಕ್ರಾಮಿಕ ರೋಗ, ಮುನ್ನೆಚ್ಚರಿಕೆಯಿಂದ ತಡೆಯಬಲ್ಲ ಕಾಯಿಲೆಯಾಗಿದ್ದು, ಕಾಯಿಲೆಯ ಲಕ್ಷಣಗಳು ರೋಗ ಕೋಳಿಗಳಲ್ಲಿ ಕಾಣಿಸಿಕೊಂಡ ಕೂಡಲೇ ಸಮೀಪದ ಮಾಹಿತಿ ಕೇಂದ್ರ ಅಥವಾ ಪಶು ವೈದ್ಯಕೀಯ ಸಂಸ್ಥೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ತಿಳಿಸಲಾಗಿದೆ.
ಅಲ್ಲದೆ ಹಕ್ಕಿ ಜ್ವರ ಪೀಡಿತ ಕೋಳಿಗಳು, ಹಕ್ಕಿಗಳು ಮತ್ತು ಬಾತುಕೋಳಿಗಳ ಸಂಪರ್ಕಕ್ಕೆ ಬರದಂತೆ ಎಚ್ಚರಿಕೆ ವಹಿಸಬೇಕು. ಅಂತಹ ಫಾರಂಗಳ ಸಂಪರ್ಕಕ್ಕೆ ಬಂದಲ್ಲಿ ತಕ್ಷಣ ಕೈಕಾಲು ಮತ್ತು ಮುಖ ತೊಳೆದುಕೊಂಡು ಬಟ್ಟೆ ಬದಲಾಯಿಸಿಕೊಳ್ಳಬೇಕು. ಜ್ವರದ ಲಕ್ಷಣ ಕಾಣಿಸಿದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು ಎಂದು ಹೇಳಲಾಗಿದೆ.
