ED: ಇಡಿ ಅಧಿಕಾರಿಗಳು ರಾಜಕಾರಣಿಗಳು, ಸರಕಾರಿ ನೌಕರರು ಹಾಗೂ ಉದ್ಯಮಿಗಳ ಮನೆ ಮೇಲೆ ED ದಾಳಿ ನಡೆಸುವುದನ್ನು ನೋಡಿದ್ದೇವೆ. ಆದರೆ ಇದೀಗ ದೇಶದ ಇತಿಹಾಸದಲ್ಲೇ ಮೊದಲಿಂದಂತೆ ಉತ್ತರ ಪ್ರದೇಶದ ಖ್ಯಾತ ಯೂಟ್ಯೂಬರ್ ಮನೆ ಮೇಲೆ ED ದಾಳಿ ನಡೆಸಿದೆ.
ಹೌದು, ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಯೂಟ್ಯೂಬರ್ (Youtuber) ಮನೆ ಮೇಲೆ ಇ.ಡಿ (ED) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಉತ್ತರ ಪ್ರದೇಶದ (Uttar Pradesh) ಉನ್ನಾವೊದ ಯೂಟ್ಯೂಬರ್ ಅನುರಾಗ್ ದ್ವಿವೇದಿ (Anurag Dwivedi) ಮನೆ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಆತನ ಬಳಿ ಇದ್ದ ಐಷಾರಾಮಿ ಕಾರುಗಳನ್ನ ಕಂಡು ಅಧಿಕಾರಿಗಳು ಶಾಕ್ ಆಗಿದ್ದಾರೆ.
ಅಂದಹಾಗೆ ಯೂಟ್ಯೂಬರ್ ಅನುರಾಗ್ ದ್ವಿವೇದಿ ಮೇಲೆ ಆನ್ಲೈನ್ ಬೆಟ್ಟಿಂಗ್ ಮತ್ತು ಜೂಜಿನ ಅಪ್ಲಿಕೇಶನ್ಗಳಿಂದ ಭಾರಿ ಪ್ರಮಾಣದ ಹಣ ಗಳಿಸಿದ ಆರೋಪವಿದೆ. ಜಾರಿ ನಿರ್ದೇಶನಾಲಯ ಅಧಿಕಾರಿಗಳು ಯೂಟ್ಯೂಬರ್ ಅನುರಾಗ್ ದ್ವಿವೇದಿ ಸಂಬಂಧಪಟ್ಟ 9 ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ. ಸುಮಾರು 10ಕ್ಕೂ ಹೆಚ್ಚು ಗಂಟೆಗಳ ಕಾಲ ದಾಖಲೆ ಪರಿಶೀಲನೆ ನಡೆಸಿದ್ದು, ತನಿಖೆ ವೇಳೆ ಜೂಜಾಟ ಜಾಲದಿಂದ ಬಂದ ಹಣ ಮತ್ತು ಅಕ್ರಮ ಗಳಿಕೆಯ ಜಾಡು ಪತ್ತೆ ಹಚ್ಚಿದ್ದಾರೆ. ಯೂಟ್ಯೂಬರ್ ದ್ವಿವೇದಿ ಸ್ಕೈ ಎಕ್ಸ್ಚೇಂಜ್ ಮತ್ತು ಅಕ್ರಮ ಬೆಟ್ಟಿಂಗ್ ಆಯಪ್ಗಳನ್ನ ಪ್ರಚಾರ ಮಾಡುವ ಮೂಲಕ ಹಣ ಗಳಿಸಿದ್ದಾರೆ ಎಂದು ಇ.ಡಿ ತಿಳಿಸಿದೆ.
ದಾಳಿಯ ವೇಳೆ ಸುಮಾರು 20 ಲಕ್ಷ ರೂ. ನಗದು ಹಾಗೂ ಮಹತ್ವದ ಡಿಜಿಟಲ್ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಿಎಂಎಲ್‌ಎ 2002ರ ಅಡಿಯಲ್ಲಿ ಅನುರಾಗ್ ಅವರಿಗೆ ಸೇರಿದ ಸುಮಾರು 3 ಕೋಟಿ ರೂ. ಮೌಲ್ಯದ ಚರ ಹಾಗೂ ಸ್ಥಿರ ಆಸ್ತಿಗಳನ್ನು ಇ.ಡಿ ಸ್ಥಗಿತಗೊಳಿಸಿದೆ. ಇದಲ್ಲದೆ, ಅವರ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿ ಹಣದ ವಹಿವಾಟುಗಳ ಬಗ್ಗೆ ತನಿಖೆ ಮುಂದುವರಿಸಲಾಗಿದೆ. ಇತ್ತೀಚೆಗೆ ದುಬೈನಲ್ಲಿ ಅದ್ಧೂರಿ ಮದುವೆ ಮಾಡಿಕೊಂಡಿದ್ದ ಅನುರಾಗ್, ತನಿಖೆಗೆ ಹಾಜರಾಗದೆ ವಿದೇಶದಲ್ಲೇ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
