Belgavi : ನಮ್ಮ ಶಾಲೆಯಲ್ಲಿ ಕೊಠಡಿಗಳ ಕೊರತೆ ಇದೆ, ಹೀಗಾಗಿ ನಾಲ್ಕು ಹೆಚ್ಚುವರಿ ಕೊಠಡಿಗಳನ್ನು ಮಾಡಿಕೊಡಿ ಎಂದು ಶಾಲಾ ಶಿಕ್ಷಕರು ಒಬ್ಬರು ಶಿಕ್ಷಣ ಇಲಾಖೆಗೆ ತೆರಳಿ ಮನವಿ ಮಾಡಿದ್ದಕ್ಕೆ ಆ ಶಿಕ್ಷಕನನ್ನು ಸಸ್ಪೆಂಡ್ ಮಾಡಿರುವಂತಹ ವಿಚಿತ್ರ ಘಟನೆ ಒಂದು ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆಯ ನಿಡಗುಂದಿ ಗ್ರಾಮದ ಅಂಬೇಡ್ಕರ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳನ್ನು ನೀಡುವಂತೆ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾದ ವೀರಣ್ಣ ಮಡಿವಾಳರ ಅವರು ಮನವಿ ಮಾಡಿದ್ದರು. ಕನ್ನಡ ಮಕ್ಕಳ ಶಾಲೆಗಾಗಿ ಉಪವಾಸ ಹಾಗೂ ಮೌನ ಕಾಲ್ನಡಿಗೆ ಜಾಥಾ ಅಭಿಯಾನವನ್ನು ಅವರು ನಡೆಸಿದ್ದರು. ಆದರೆ, ಈ ಅಭಿಯಾನದಿಂದ ಅವರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಶಿಕ್ಷಕರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.
ಸದ್ಯ ಬಿಇಓ ಅವರ ಈ ನಿರ್ಧಾರಕ್ಕೆ ಗ್ರಾಮಸ್ಥರು ಹಾಗೂ ಕನ್ನಡಿಗರು ಸರ್ಕಾರದ ನಿರ್ಧಾರಕ್ಕೆ ಗರಂ ಆಗಿದ್ದಾರೆ. ಅಮಾನತು ಆಗಿರುವ ಶಿಕ್ಷಕರು ಕೂಡ ಸರ್ಕಾರಕ್ಕೆ ಸುಧೀರ್ಘ ಪತ್ರ ಬರೆದಿದ್ದಾರೆ. ದಯಮಾಡಿ ನನ್ನ ವರ್ತನೆಗಳ ಕುರಿತು ನಿಮ್ಮ ಪೂರ್ವಾಗ್ರಹಗಳನ್ನು ಮತ್ತೊಮ್ಮೆ ಪರಿಶೀಲಿಸಬೇಕೆಂದು ಕೋರುವೆ ಅಂತ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
