LKG: ಮಕ್ಕಳನ್ನು ಶಾಲೆಗೆ ಬರಲು ಆಕರ್ಷಿಸಲು ರಾಜ್ಯ ಸರ್ಕಾರ ಹಲವು ಮಹತ್ವದ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇತ್ತೀಚಿಗಷ್ಟೇ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿದಿನವೂ ಮೊಟ್ಟೆ ವಿತರಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದನ್ನೆಲ್ಲೆ ಇದೀಗ LKG ಮಕ್ಕಳಿಗೂ ಕೂಡ ಮೊಟ್ಟೆ ವಿತರಿಸಲು ರಾಜ್ಯ ಸರ್ಕಾರ ಆದೇಶ ನೀಡಿದೆ.
ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 51.61 ಲಕ್ಷ ಮಕ್ಕಳಿಗೆ 2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ 244 ದಿನ ಮೊಟ್ಟೆ/ಬಾಳೆಹಣ್ಣು ವಿತರಿಸಲು ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ವಾರದಲ್ಲಿ 2 ದಿನ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನದಲ್ಲಿ ಮತ್ತು ಉಳಿದ ನಾಲ್ಕು ದಿನ ಅಜೀಂ ಪ್ರೇಮ್ ಜಿ ಫೌಂಡೇಶನ್ ಸಹಯೋಗದಲ್ಲಿ ಪೌಷ್ಠಿಕ ಆಹಾರ ವಿತರಿಸಲಾಗುತ್ತದೆ.
ಪೂರ್ವ ಪ್ರಾಥಮಿಕ(LKG) ತರಗತಿಯಿಂದ 10ನೇ ತರಗತಿವರೆಗಿನ ಮಕ್ಕಳು ಯೋಜನೆಯ ಫಲಾನುಭವಿಗಳಾಗಿದ್ದು, ಪ್ರತಿ ವಿದ್ಯಾರ್ಥಿಗೆ ದಿನಕ್ಕೆ ಒಂದು ಮೊಟ್ಟೆ ಅಥವಾ 2 ಬಾಳೆಹಣ್ಣಿಗೆ 6 ರು. ವಿನಿಯೋಗಿಸಲಾಗುತ್ತದೆ. ಮೊಟ್ಟೆಯ ತೂಕ ಕನಿಷ್ಟ 50 ಗ್ರಾಂ. ಇರಬೇಕು. ಮೊಟ್ಟೆ ತಿನ್ನದ ಮಕ್ಕಳಿಗೆ ಎರಡು ಉತ್ತಮವಾದ ಬಾಳೆ ಹಣ್ಣುಗಳನ್ನು ವಿತರಿಸಬೇಕು. ಮೊಟ್ಟೆ ಮತ್ತು ಬಾಳೆ ಹಣ್ಣು ತಿನ್ನುವ ಮಕ್ಕಳ ಅಂಕಿ-ಅಂಶಗಳನ್ನು ಇಲಾಖೆಗೆ ಅಪ್‌ಡೇಟ್ ಮಾಡಬೇಕು ಎಂದು ಸೂಚಿಸಲಾಗಿದೆ.
