Eshwaramangala: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದಲ್ಲಿ ಕಾರ್ಯಾಚರಿಸುತ್ತಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ 17 ನೇ ಶಾಖೆಯ ಪುತ್ತೂರು ತಾಲೂಕಿನ ಈಶ್ವರಮಂಗಲದ ಶ್ರೀ ಗಣೇಶ್ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ಜ. 10 ರಂದು ಉದ್ಘಾಟನೆಗೊಂಡಿತು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಈಶ್ವರಮಂಗಲ ನೂತನ ಶಾಖೆ ಉದ್ಘಾಟಿಸಿ, ” ಆದರ್ಶ ಸೊಸೈಟಿ ಇವತ್ತು 17 ಶಾಖೆ ತೆರೆದು ಈಗಾಗಲೇ ಹೆಸರು ಮಾಡಿದ್ದು, ಅನೇಕ ಬಡವರಿಗೆ ಕೆಲಸ ಕೊಟ್ಟಿದ್ದಾರೆ. ಇದು ದೇಶದ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆಯಲಿ ಎಂದು ಶುಭ ಹಾರೈಸಿ, ಸವಣೂರು ಸೀತಾರಾಮ ರೈ ಮತ್ತು ಸವಣೂರು ಸುಂದರ ರೈಯವರು ಸವಣೂರಿನ ಟಾಟಾ ಮತ್ತು ಬಿರ್ಲಾ ಎಂದು ವ್ಯಾಖ್ಯಾನಿಸಿದರು.
ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರವರು ಭದ್ರತಾ ಕೊಠಡಿ ಉದ್ಘಾಟಿಸಿ, ” ಬೆಳೆಯುತ್ತಿರುವ ಈಶ್ವರಮಂಗಲ ಇಂದು ವಿವಿಧ ಕ್ಷೇತ್ರದಲ್ಲಿ ಬೆಳೆಯುತ್ತಿದ್ದು, ಈಶ್ವರಮಂಗಲ ಐಶ್ವರ್ಯಮಂಗಲವಾಗಲಿ” ಎಂದು ಶುಭಹಾರೈಸಿದರು.
ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಗೊಟ್ಟುರವರು ಪ್ರಥಮ ಠೇವಣಿಪತ್ರ ಬಿಡುಗಡೆ ಮಾಡಿ ಮಾತನಾಡಿ,”ಆದರ್ಶ ಸೊಸೈಟಿ ಬೆಳವಣಿಗೆಯಾಗುತ್ತಿದ್ದು, ಸವಣೂರಿನಲ್ಲಿ ಸೊಸೈಟಿಯ ಮುಖ್ಯ ಕಚೇರಿ ಆರಂಭವಾಗಲಿದ್ದು, ನಾವೆಲ್ಲರೂ ಸೀತಾರಾಮ ರೈಯವರೊಂದಿಗೆ ಕೈ ಜೋಡಿಸೋಣ” ಎಂದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಎಸ್.ಬಿ.ಜಯರಾಮ್ ರೈ, ನೆಟ್ಟಣಿಗೆ ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಫೌಯೀಯ ಇಬ್ರಾಹಿಂ, ಶ್ರೀ ಗಣೇಶ್ ಕಾಂಪ್ಲೆಕ್ಸ್ ಮಾಲಕ ಗಣೇಶ್ ರೈ ಮುಳಿಪಡ್ಡು, ಸಂಘದ ಉಪಾಧ್ಯಕ್ಷ ಎನ್.ಸುಂದರ ರೈ ಸವಣೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
