Telangana: ತೆಲಂಗಾಣದಲ್ಲಿ ಒಂದು ವಿಚಿತ್ರ ಬೆಳವಣಿಗೆ ನಡೆದಿದ್ದು ಮಾಜಿ ಸಿಎಂ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ. ಕವಿತಾ (K Kavitha) ಅವರನ್ನು “ಪಕ್ಷ ವಿರೋಧಿ ಚಟುವಟಿಕೆ” ಆರೋಪದ ಮೇಲೆ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್)ಯಿಂದ ಹೊರಹಾಕಲಾಗಿದೆ. ಈ ಮೂಲಕ ತಂದೆಯ ಪಕ್ಷದಿಂದ ಸ್ವಂತ ಮಗಳನ್ನೇ ಹೊರಹಾಕಲಾಗಿದೆ.
ಹೌದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಆರ್‌ಎಸ್ ಪಕ್ಷ ಸೋಲು ಕಂಡು ಅಧಿಕಾರ ಕಳೆದುಕೊಂಡಿತ್ತು. ಬಳಿಕ ಪಕ್ಷದಲ್ಲಿ ಆಂತರಿಕ ಸಮಸ್ಯೆಗಳೇ ಹೆಚ್ಚಾಗಿತ್ತು. ಇದರ ಬೆನ್ನಲ್ಲೇ ಪಕ್ಷ ಮುನ್ನಡೆಸುತ್ತಿರುವ ಕೆ ಚಂದ್ರಶೇಖರ್ ರಾವ್ ತಮ್ಮ ಮಗಳನ್ನೇ ಪಕ್ಷದಿಂದ ಅಮಾನತು ಮಾಡಿದ ಘಟನೆ ನಡೆದಿದೆ.
ಅಂದಹಾಗೆ ಕವಿತಾ ಅವರು ತನ್ನ ಸೋದರಸಂಬಂಧಿಗಳು ಮತ್ತು ಬಿಆರ್‌ಎಸ್ ನಾಯಕರಾದ ಟಿ.ಹರೀಶ್ ರಾವ್ ಮತ್ತು ಜೆ. ಸಂತೋಷ್ ಕುಮಾರ್ ಅವರು ತಮ್ಮ ತಂದೆ ಕೆಸಿಆರ್ ಅವರ ಪ್ರತಿಷ್ಠೆಯನ್ನು ಹಾಳು ಮಾಡಲು ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರೊಂದಿಗೆ ಮೌನ ಒಪ್ಪಂದವನ್ನು ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಅದರ ಬೆನ್ನಲ್ಲೇ ಬಿಆರ್‌ಎಸ್ ಎಂಎಲ್‌ಸಿ ಕವಿತಾ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.
“ಬಿಆರ್‌ಎಸ್ ಅಧ್ಯಕ್ಷ ಕೆ. ಚಂದ್ರಶೇಖರ್ ರಾವ್ ಅವರು ಕೆ. ಕವಿತಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದಿಂದ ಅಮಾನತುಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಪಕ್ಷದ ಎಂಎಲ್‌ಸಿ ಕೆ. ಕವಿತಾ ಅವರ ಇತ್ತೀಚಿನ ನಡವಳಿಕೆ ಮತ್ತು ನಡೆಯುತ್ತಿರುವ ಪಕ್ಷ ವಿರೋಧಿ ಚಟುವಟಿಕೆಗಳು ಪಕ್ಷಕ್ಕೆ ಹಾನಿ ಮಾಡುತ್ತಿವೆ. ಆದ್ದರಿಂದ ಪಕ್ಷದ ನಾಯಕತ್ವವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ” ಎಂದು ಬಿಆರ್‌ಎಸ್ ಪೋಸ್ಟ್ ಮಾಡಿದೆ.
ಇದೀಗ ಬಿಆರ್‌ಎಸ್ ಪಕ್ಷ ಈಗಾಗಲೇ ಸಂಕಷ್ಟದಲ್ಲಿದೆ. ಇದರೊಂದಿಗೆ ಕೆ ಕವಿತಾ ಅಮಾನತು ಪಕ್ಷವನ್ನು ಮತ್ತಷ್ಟ ದುರ್ಬಲಗೊಳಿಸಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಈ ಬೆಳವಣಿಗೆ ಪಕ್ಷದ ಆತಂರಿಕ ಬಿಕ್ಕಟ್ಟು ಮತ್ತಷ್ಟು ಹೆಚ್ಚಿಸಲಿದೆ ಎಂದು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಇತ್ತ ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ ಅನ್ನೋ ಆರೋಪಗಳು ಕೇಳಿಬರುತ್ತಿದೆ.
Delhi: ವಿದೇಶ ಪ್ರವಾಸಿಗರಿಂದಲೂ ಲಂಚ – ದೇಶದ ಮಾನ ಹರಾಜಾಕಿದ ಟ್ರಾಫಿಕ್ ಪೊಲೀಸರು!!
