Bagalakote : ಉತ್ತರ ಕರ್ನಾಟಕದ ಭಾಗದಲ್ಲಿ ಕಬ್ಬು ಸಾಗಿಸಲು ಒಂದು ಟ್ರ್ಯಾಕ್ಟರ್ ಗೆ ಎರಡೆರಡು ಟ್ರ್ಯಾಲಿಗಳನ್ನು ಕಟ್ಟಿಕೊಂಡು ಒಯ್ಯುವುದು ಸಾಮಾನ್ಯ. ಇದು ಈ ಭಾಗದ ರೈತರಿಗೆ ರೂಢಿಯಾಗಿ ಬಿಟ್ಟಿದೆ. ಆದರೆ ಈಗ ಅಚ್ಚರಿ ಎಂಬಂತೆ ಇಲ್ಲೊಬ್ಬ ರೈತ ಏಕಕಾಲಕ್ಕೆ ಒಂದೇ ಟ್ರ್ಯಾಕ್ಟರ್ ಗೆ 16 ಟ್ರಾಲಿ ಜೋಡಣೆ ಮಾಡಿ, ಕಬ್ಬು ಸಾಗಿಸಿ ಸಾಹಸ ಮೆರೆದಿದ್ದಾರೆ.
ಹೌದು, ಬಾಗಲಕೋಟೆ ಜಿಲ್ಲೆಯ ನಾಗರಾಳ ಗ್ರಾಮದ ರೈತರು, ಕಬ್ಬು ಕಟಾವು ಗ್ಯಾಂಗನ ಕಾರ್ಮಿಕರು, ಟ್ರಾಕ್ಟರ್ ಡ್ರೈವರ್ ಮಗದೊಂದು ಸಾಹಸ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ನಾಗರಾಳ ಗ್ರಾಮದ ಬಸಯ್ಯಾ ರಾ.ಹಿರೇಮಠ ಅವರ ಮಾಲೀಕತ್ವದ ಟ್ರಾಕ್ಟರ್ ಗೆ ಪಾಂಡು ಉಪ್ಪಾರ ಎಂಬ ಚಾಲಕನು ಕಬ್ಬು ತುಂಬಿದ 16 ಡಬ್ಬಿಗಳನ್ನು ಏಕಕಾಲಕ್ಕೆ ಜೋಡಿಸಿ ನಾಗರಾಳ ಗ್ರಾಮದಿಂದ ಸುಮಾರು-5-6 ಕೀಮಿ ದೂರ ಸಾಗಿಸಿದ್ದಾರೆ.
ಕಬ್ಬು ಸಾಗಾಟ ವೇಳೆ ಒಂದು ಡಬ್ಬಿಗೆ 2-3 ಜನರಂತೆ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಸಾಹಸದ ಕುರಿತು ಟ್ರಾಕ್ಟರ್ ಚಾಲಕ ಮತ್ತು ಮಾಲೀಕರು ಉದಯವಾಣಿ ಸಂಪರ್ಕಕ್ಕೆ ಸಿಗಲಿಲ್ಲ. ಶುಕ್ರವಾರ ಸಂಜೆ ನಾಗರಾಳ ಗ್ರಾಮದಿಂದ ಹೊರಟು ತಡರಾತ್ರಿವರೆಗೆ ಸುಮಾರು 6 ಕೀಮಿ ಕ್ರಮಿಸಿ ಸಾಹಸ ಮೆರೆದಿದ್ದಾರೆ.
