Punjalkatte: ಮಾ.8 (ಶನಿವಾರ) ರಂದು ಬಂಟ್ವಾಳ-ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ಕಾವಳಪಡೂರು ಗ್ರಾಮದ ಬಾಂಬಿಲ ಎಂಬಲ್ಲಿ ತೆಂಗಿನೆಣ್ಣೆ ಮಿಲ್ ಅಗ್ನಿಗಾಹುತಿಯಾದ ಘಟನೆ ನಡೆದಿದೆ.
ಜಯರಾಮ ಗೌಡ ಅವರ ಮಾಲಕತ್ವದ ಐ ಗ್ರೋ ಇನ್ ಕಾರ್ಪ್ ಎಂಬ ಮಿಲ್ ಬೆಂಕಿಗಾಹುತಿಯಾಗಿದ್ದು, ಸುಮಾರು ಮೂರು ಕೋಟಿ ರೂ. ಮೌಲ್ಯದ ಸೊತ್ತುಗಳು ನಾಶವಾಗಿದೆ.
ಇವರ ಮನೆ ಸಮೀಪವೇ ಮಿಲ್ ಇದ್ದು, ಶನಿವಾರ ಸರಿಸುಮಾರು ಒಂದು ಗಂಟೆಯ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಅವರು ಸ್ಥಳೀಯರನ್ನು, ಅಗ್ನಿಶಾಮಕ ದಳದವರನ್ನು ಕರೆಸಿದ್ದರು. ಆದರೆ ಬೆಂಕಿ ಹೆಚ್ಚಾದ ಕಾರಣ ಯಾರಿಗೂ ಏನೂ ಮಾಡಲು ಆಗಲಿಲ್ಲ. ನಂತರ ಬಂಟ್ವಾಳ ಅಗ್ನಿ ಶಾಮಕದಳ ಬಂದು ಬೆಂಕಿ ನಂದಿಸುವ ಪ್ರಯತ್ನ ಮಾಡಿದೆ. ಅಷ್ಟರಲ್ಲಾಗಲೇ ಮಿಲ್ ಸಂಪೂರ್ಣ ಸುಟ್ಟು ಭಸ್ಮವಾಗಿದೆ.
12 ಟನ್‌ನಷ್ಟು ತೆಂಗಿನೆಣ್ಣೆ, ಕಚ್ಚಾ ತೆಂಗಿನಕಾಯಿ, ಮೆಷಿನರಿಗಳು ಸೇರಿ ಎಲ್ಲವೂ ಸುಟ್ಟು ಹೋಗಿದೆ. ಮೂರು ಕೋಟಿ ನಷ್ಟ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಈ ಘಟನೆಗೆ ಕಾರಣವಾಗಿರಬಹುದು ಎಂದು ಹೇಳಲಾಗಿದೆ.
ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದೆ.
