Anekal: ಕಸಕ್ಕೆಂದು ಹಚ್ಚಿದ ಬೆಂಕಿ, ಪಕ್ಕದಲ್ಲಿದ್ದ ಕಾರಿಗೆ ತಾಗಿ, ಸಂಪೂರ್ಣ ಕರಕಲಾಗಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ನಡೆದಿದೆ. ವಿಘ್ನೇಶ್ ಎಂಬುವವರಿಗೆ ಸೇರಿದ್ದ ಕಾರು ಇದಾಗಿದ್ದು, ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ವಿಘ್ನೇಶ್ ಮತ್ತು ಗೌರಿಶಂಕರ್ ಇಬ್ಬರು ಗೆಳೆಯರು. ಶನಿವಾರ ಬೆಳಗ್ಗೆ ಗೌರಿಶಂಕರ್ ಕಾರಿನಲ್ಲಿ ಚೆನ್ನೈನಿಂದ ಬೆಂಗಳೂರಿಗೆ ಬಂದಿದ್ದು, ಸ್ನೇಹಿತರೊಂದಿಗೆ ಸುತ್ತಾಡಿದ್ದು, ರಾತ್ರಿ 12 ಗಂಟೆಯ ಹೊತ್ತಿಗೆ ಚಂದಾಪುರದ ಕೀರ್ತಿ ಲೇಔಟ್ ಸಮೀಪದಲ್ಲಿ ಸ್ನೇಹಿತನ ಪಿಜಿ ಬಳಿ ಕಾರನ್ನು ನಿಲ್ಲಿಸಿದ್ದರು.
ಬೆಳಗ್ಗೆ 3 ಗಂಟೆಯ ವೇಳೆಗೆ ಕಸದ ರಾಶಿಗೆ ಯಾರೋ ಬೆಂಕಿ ಹಚ್ಚಿದ್ದಾರೆ. ಬೆಂಕಿಯ ಕಿಡಿ ಕಾರಿಗೆ ಹತ್ತಿದೆ. ಕಾರು ಹೊತ್ತಿ ಉರಿದಿದೆ. ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ. ಸುಟ್ಟು ಹೋದ ಕಾರಿನ ಪಕ್ಕ ಮತ್ತೊಂದು ಕಾರು, ದ್ವಿಚಕ್ರ ವಾಹನವಿತ್ತು. ಆದರೆ ಆ ವಾಹನಗಳಿಗೆ ಹಾನಿಯಾಗಿಲ್ಲ.
ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
