ಉಜಿರೆ: ಬೆಳ್ತಂಗಡಿ ತಾಲ್ಲೂಕಿನಲ್ಲಿ ಮೊದಲ ಬಾರಿಗೆ ಐಯುಐ (ಐಯುಐ – ಇಂಟ್ರಾ ಯುಟೆರೈನ್ ಇನ್ಸೆಮಿನೇಷನ್) ಚಿಕಿತ್ಸಾ ವಿಭಾಗವನ್ನು ಬೆನಕ ಹೆಲ್ತ್ ಸೆಂಟರ್, ಉಜಿರೆಯಲ್ಲಿ ಉದ್ಘಾಟಿಸಲಾಯಿತು. ಈ ಕಾರ್ಯಕ್ರಮವನ್ನು ಹಿರಿಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ. ವಿನಯಾ ಕಿಶೋರ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಮಾತನಾಡಿದ ಅವರು, “ಇದು ಬೆಳ್ತಂಗಡಿ ತಾಲ್ಲೂಕಿಗೆ ಹೆಮ್ಮೆಯ ಕ್ಷಣ. ಐಯುಐ ವಿಭಾಗವು ಇಲ್ಲಿನ ಜನರಿಗೆ ಅತ್ಯಂತ ಅಗತ್ಯವಾಗಿತ್ತು. ಇದು ಡಾ. ಗೋಪಾಲಕೃಷ್ಣ ಹಾಗೂ ಡಾ. ಭಾರತಿ ಜಿಕೆ ಅವರ ಕನಸಿನ ಫಲಿತಾಂಶವಾಗಿದೆ. ಐಯುಐ ಚಿಕಿತ್ಸೆಯ ಲಾಭಗಳ ಬಗ್ಗೆ ಇನ್ನೂ ಅನೇಕರು ತಿಳಿದುಕೊಂಡಿಲ್ಲ. ಈ ಸೇವೆ ತಾಲ್ಲೂಕಿನ ಜನರಿಗೆ ಬಹಳ ಸಹಕಾರಿಯಾಗಲಿದೆ” ಎಂದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಗೋಪಾಲಕೃಷ್ಣ ಅವರು ಮಾತನಾಡಿ, ಬೆನಕ ಆಸ್ಪತ್ರೆಯಲ್ಲಿ ಐವಿಎಫ್ (IVF) ಕೇಂದ್ರ ಸ್ಥಾಪಿಸುವುದು ನನ್ನ ಮುಂದಿನ ದೊಡ್ಡ ಕನಸಾಗಿದೆ. ಪ್ರಸ್ತುತ ಐಯುಐ ವಿಭಾಗವನ್ನು ಪ್ರಾರಂಭ ಮಾಡಿದ್ದೇವೆ. ಡಾ. ನವ್ಯ ಭಟ್ ಅವರಿಗೆ ಶುಭಾಶಯಗಳನ್ನು ತಿಳಿಸಿದರು. ಡಾ. ಭಾರತಿ ಜಿಕೆ ಅವರು ಮಾತನಾಡಿ, “ಹಿಂದಿನ ದಿನಗಳಲ್ಲಿ ಬಂಜೆತನದ ಸಮಸ್ಯೆ ಇರುವ ಅನೇಕ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಹಾಗೂ ಬೆಂಗಳೂರಿಗೆ ಕಳುಹಿಸಬೇಕಾಗುತ್ತಿತ್ತು. ಈಗ ನಮ್ಮದೇ ಆಸ್ಪತ್ರೆಯಲ್ಲಿ ಐಯುಐ ಚಿಕಿತ್ಸೆ ಲಭ್ಯವಿರುವುದರಿಂದ ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬಹುದು” ಎಂದು ಹೇಳಿದರು.
ಸ್ತ್ರೀರೋಗ ಹಾಗೂ ಐವಿಎಫ್ ತಜ್ಞೆಯಾದ ನವ್ಯ ಭಟ್ ಅವರು ಮಾತನಾಡಿ, ಐಯುಐ ಚಿಕಿತ್ಸೆಯ ಎಂಬುದು ಸರಳ ಹಾಗೂ ಸುರಕ್ಷಿತ ಚಿಕಿತ್ಸೆಯಾಗಿದೆ. ಬಂಜೆತನವಿರುವ ಮಹಿಳೆಯ ಪತಿಯ ಅರೋಗ್ಯಕರ ವೀರ್ಯವನನ್ನು ಆಯ್ಕೆ ಮಾಡಿ, ಸರಿಯಾದ ಸಮಯದಲ್ಲಿ ಪತ್ನಿಯ ಗರ್ಭಾಶಯದೊಳಗೆ ನೇರವಾಗಿ ಇಂಜೆಕ್ಷನ್ ಮೂಲಕ ಕೊಡಲಾಗುತ್ತದೆ. ಈ ವಿಧಾನದಿಂದ ಗರ್ಭಧಾರಣೆಯ ಸಾಧ್ಯತೆ ಹೆಚ್ಚಾಗುತ್ತದೆ. ಯಾವುದೇ ನೋವಿಲ್ಲದೇ, ಕೆಲವೇ ಸಮಯಗಳನ್ನು ಪೂರ್ಣಗೊಳ್ಳುವ ಪ್ರಕ್ರಿಯೆಯಾಗಿದೆ. ಮುಖ್ಯವಾಗಿ ಬಂಜೆತನ ಸಮಸ್ಯೆ ಎದುರಿಸುತ್ತಿರುವ ದಂಪತಿಗಳು ಬೆನಕ ಆಸ್ಪತ್ರೆಗೆ ಬಂದು ಈ ಸೇವೆಯನ್ನು ಬಳಸಿಕೊಳ್ಳಬೇಕು” ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತುರ್ತುಚಿಕಿತ್ಸಾ ವೈದ್ಯರಾದ ಡಾ. ಆದಿತ್ಯ ರಾವ್, ಸ್ತ್ರೀರೋಗ ತಜ್ಞೆ ಹಾಗೂ ಕೀರಂಧ್ರ ಶಸ್ತ್ರ ಚಿಕಿತ್ಸೆ ತಜ್ಞ ಡಾ. ಅಂಕಿತಾ ಜಿ ಭಟ್, ಆಸ್ಪತ್ರೆಯ ಜನರಲ್ ಮ್ಯಾನೇಜರ್ ದೇವಸ್ಯ ವರ್ಗೀಸ್ ಉಪಸ್ಥಿತರಿದ್ದರು. ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಸ್. ಜಿ. ಭಟ್ ಅವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.
