Chamundi Betta: ರಾಜ್ಯ ಸರ್ಕಾರವು ಚಾಮುಂಡಿ ಬೆಟ್ಟ(Chamundi Betta) ಅಭಿವೃದ್ಧಿ ಪ್ರಾಧಿಕಾರದ ರಚನೆಗೆ ಮುಂದಾಗಿದ್ದು ಇದನ್ನು ಮೈಸೂರು(Mysore) ರಾಜವಂಶಸ್ಥರು ವಿರೋಧಿಸುತ್ತಿದ್ದಾರೆ. ಅದರಲ್ಲೂ ರಾಜ ಮಾತೆ ಪ್ರಮೋದಾ ದೇವಿ ಒಡೆಯರ್(Prmoda Devi wadiyar) ಅವರು ತೀವ್ರವಾಗಿ ಖಂಡಿಸಿ, ಹೈಕೋರ್ಟ್ ಮೆಟ್ಟಲನ್ನೂ ಏರಿದ್ದಾರೆ. ಪ್ರಮೋದಾ ದೇವಿ ಸಲ್ಲಿಸಿದ ರಿಟ್ ಅರ್ಜಿಯನ್ನು ಪರಿಗಣಿಸಿದ ಹೈಕೋರ್ಟ್ ಜುಲೈ 26ರಂದು ಸರ್ಕಾರದ ನಿರ್ಧಾರಕ್ಕೆ ತಡೆಯಾಜ್ಞೆ ನೀಡಿದೆ.
ಹೌದು, ಸಾಂಸ್ಕೃತಿಕ ನಗರಿ ಮೈಸೂರಿನ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯದ ಮಾಲೀಕತ್ವದ ಕುರಿತಾಗಿ ವಿವಾದ ಉಂಟಾಗಿದೆ. ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದು ರಾಜವಂಶಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ. ಹೈಕೋರ್ಟ್ ಮೊರೆ ಹೋಗಿ ಪ್ರಾಧಿಕಾರಕ್ಕೆ ತಾತ್ಕಾಲಿಕ ತಡೆಯಾಜ್ಞೆ ತಂದಿದ್ದಾರೆ. ಈ ಬೆಳವಣಿಗೆಯು ಮೈಸೂರಿನ ರಾಜವಂಶಸ್ಥರು ಹಾಗೂ ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಕಾನೂನು ಹೋರಾಟಕ್ಕೆ ನಾಂದಿ ಹಾಡಿದೆ. ಹಾಗಿದ್ರೆ ಏನಿದು ವಿವಾದ? ಪ್ರಧಿಕಾರದ ರಚನೆಗೆ ರಾಜವಂಶಸ್ಥರ ವಿರೋಧವೇಕೆ? ರಾಜಮಾತೆ, ರಾಜರು ಹೇಳೋದೇನು?
ರಾಜಮಾತೆ ಪ್ರಮೋದಾ ದೇವಿ ಹೇಳೋದೇನು?
ಅರಮನೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ರಾಜಮನೆತನವು ನಿರ್ವಹಣೆಗಷ್ಟೇ ಬೆಟ್ಟವನ್ನು ಸರ್ಕಾರಕ್ಕೆ ವಹಿಸಿದ್ದೇ ಹೊರತು ಸ್ವಂತ ಆಸ್ತಿಯಾಗಿ ಮಾಡಿಕೊಳ್ಳುವುದಕ್ಕಲ್ಲ. ಆದರೆ, ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ–2024 ಮೂಲಕ ಸರ್ಕಾರವು ಬೆಟ್ಟವನ್ನು ಸ್ವಂತದ್ದಾಗಿ ಮಾಡಿಕೊಳ್ಳುತ್ತಿತ್ತು’ ಎಂದರು.
‘ಒಕ್ಕೂಟದಲ್ಲಿ ವಿಲೀನವಾದಾಗ ನಡೆದ ಒಪ್ಪಂದದಲ್ಲಿ ರಚನೆಯಾದ ಮೈಸೂರು ಸಂಸ್ಥಾನದ ಖಾಸಗಿ ಆಸ್ತಿಗಳ ಪಟ್ಟಿಯಲ್ಲಿ ಚಾಮುಂಡಿ ಬೆಟ್ಟವೂ ಇದೆ. 1972ರಲ್ಲಿ ಕೇಂದ್ರ ಗೃಹ ಸಚಿವಾಲಯವು ಖಾಸಗಿ ಆಸ್ತಿಗಳು ರಾಜವಂಶಸ್ಥರಿಗೆ ಸೇರಿದ್ದೆಂದು, ಅವುಗಳಿಗೆ ಸಂವಿಧಾನದ 26ನೇ ತಿದ್ದುಪಡಿ ಅನ್ವಯವಾಗುವುದಿಲ್ಲವೆಂದು ಕಳಿಸಿದ್ದ ಮೆಮೊವನ್ನು ಸರ್ಕಾರವೂ ಒಪ್ಪಿಕೊಂಡಿದೆ’ ಎಂದು ವಿವರಿಸಿದರು
ಚಾಮುಂಡಿ ಬೆಟ್ಟದ ದೇಗುಲ, ಹೊಂದಿಕೊಂಡ ಕಟ್ಟಡಗಳು, ರಾಜೇಂದ್ರ ವಿಲಾಸ, ಉದ್ಯಾನ, ಮಹಾಬಲೇಶ್ವರ, ನಾರಾಯಣಸ್ವಾಮಿ, ಉತ್ತನಹಳ್ಳಿ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಿ ದೇಗುಲಗಳು, ದೇವಿಕೆರೆ, ಉದ್ಯಾನ, 700ನೇ ಮೆಟ್ಟಿಲಿನಲ್ಲಿರುವ ನಂದಿ, ಲಲಿತಾದ್ರಿ ಕಾಟೇಜ್, ಮೂರು ಪಂಪ್ ಹೌಸ್‌ಗಳು ಖಾಸಗಿ ಆಸ್ತಿ ಪಟ್ಟಿಯಲ್ಲಿವೆ’ ಎಂದರು.
‘ಬೆಟ್ಟವನ್ನು ಮುಜರಾಯಿ ಇಲಾಖೆಗೆ ವಹಿಸಿದ್ದನ್ನು 2001ರಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಪ್ರಶ್ನಿಸಿರುವ ವ್ಯಾಜ್ಯವು ಹೈಕೋರ್ಟ್‌ಲ್ಲಿದ್ದು, ವಿಚಾರಣೆ ನಡೆಯುತ್ತಿದೆ. ಹೀಗಿರುವಾಗ ಪ್ರಾಧಿಕಾರ ರಚಿಸಿದ್ದನ್ನು ಪ್ರಶ್ನಿಸಿದ್ದೆವು’ ಎಂದರು.
‘ಅಭಿವೃದ್ಧಿಯಿಂದ ವಯನಾಡ್, ಕೊಡಗಿನಲ್ಲಿ ಏನಾಗಿದೆಯೆಂಬುದು ಎಲ್ಲರಿಗೂ ಗೊತ್ತಿದೆ. ಬೆಟ್ಟದಲ್ಲಿ ಪ್ರವಾಸಿ ಕೇಂದ್ರಿತ ಅಭಿವೃದ್ಧಿಯಾಗುತ್ತಿದೆ. ದೇಗುಲದ ಪರಂಪರೆ, ಬೆಟ್ಟವನ್ನು ಬೆಟ್ಟದಂತೆಯೇ ಉಳಿಸಿಕೊಳ್ಳಬೇಕು’ ಎಂದು ಪ್ರತಿಪಾದಿಸಿದರು.
‘ಸ್ವಾತಂತ್ರ್ಯದ ನಂತರ ಬಂದ ಎಲ್ಲ ಸರ್ಕಾರಗಳೂ ಒಂದಲ್ಲಾ ಒಂದು ತೊಂದರೆ ನೀಡುತ್ತಿದ್ದು, ಎದುರಿಸುತ್ತಲೇ ಸಾಗಿದ್ದೇವೆ. ಕುರುಬಾರಹಳ್ಳಿ ಸರ್ವೆ ಸಂಖ್ಯೆ 4ರ ಪ್ರಕರಣ, ದೊಡ್ಡಕೆರೆ ಮೈದಾನದ ಪ್ರಕರಣದಲ್ಲಿ ನಮ್ಮ ಪರ ತೀರ್ಪಾಗಿದೆ. ಈಗ ಖಾತೆ ಮಾಡಿಕೊಡದಿದ್ದರೆ 30 ವರ್ಷದ ನಂತರವಾದರೂ ಮಾಡಿ ಕೊಡಲೇಬೇಕು’ ಎಂದು ಹೇಳಿದರು. ‘ದೇಶದ ಕಾನೂನು ಎಲ್ಲರಿಗೂ ಒಂದೇ. ಆಸ್ತಿ ಕಳೆದುಕೊಂಡರೆ ಬದಲಿ ಆಸ್ತಿ ಅಥವಾ ಅದರ ಮೌಲ್ಯವನ್ನು ಪಾವತಿಸಬೇಕು. ಆದರೆ, ನಮಗಿದು ಪಾಲನೆಯಾಗುತ್ತಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ‘ದಶಕಗಳ ಹಿಂದೆ ಬೆಟ್ಟವನ್ನು ನಿರ್ವಹಣೆ ಮಾಡಲಾಗುವುದಿಲ್ಲವೆಂದು ಸರ್ಕಾರಕ್ಕೆ ಪತ್ರ ಬರೆದಿದ್ದು ನಿಜ. ಅಂದಿನ ಪರಿಸ್ಥಿತಿ, ಕಾರಣಗಳು ಬೇರೆಯೇ ಆಗಿದ್ದವು. ತೀರ್ಪು ನಮ್ಮಂತೆಯೇ ಬಂದರೆ ದೇಗುಲ ನಿರ್ವಹಣೆಗೆ ತಯಾರಿದ್ದೇವೆ’ ಎಂದು ತಿಳಿಸಿದರು.
ಯದುವೀರ್ ಹೇಳಿದ್ದೇನು?
ಚಾಮುಂಡಿ ಬೆಟ್ಟ ನಮ್ಮ ಸಂಸ್ಥಾನಕ್ಕೆ ಸೇರಿದ್ದು, ಪ್ರಾಧಿಕಾರದ ರಚನೆ ಅಗತ್ಯವಿಲ್ಲ ಎಂದು ಮೈಸೂರು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ. ಕರ್ನಾಟಕ ಸರ್ಕಾರ ಚಾಮುಂಡಿ ಬೆಟ್ಟ ಪ್ರಾಧಿಕಾರ ರಚನೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಚಾಮುಂಡಿ ಬೆಟ್ಟ ಈಗ ಹೇಗಿದೆಯೋ ಮುಂದೆಯೂ ಹಾಗೆಯೇ ಇರಲಿ. ಚಾಮುಂಡಿ ಬೆಟ್ಟ ಪ್ರಾಧಿಕಾರ ರಚನೆಗೆ ಕೋರ್ಟ್ ತಡೆಯಾಜ್ಞೆ ನೀಡಿದೆ. ದೇವಸ್ಥಾನದ ಜೊತೆ ಯಾವ ಸಂಸ್ಥಾನದ ಸಂಬಂಧ ಇದೆಯೋ ಆ ಸಂಸ್ಥಾನಕ್ಕೆ ದೇವಸ್ಥಾನ ಸೇರಬೇಕು ಎಂದು ಪರೋಕ್ಷವಾಗಿ ಚಾಮುಂಡಿ ಬೆಟ್ಟ ತಮ್ಮ ಆಸ್ತಿ ಎಂದು ಹೇಳಿದರು.
ಪ್ರಾಧಿಕಾರ ರಚನೆಗೆ ರಾಜಮನೆತನದ ವಿರೋಧವೇಕೆ?
* ರಾಜಮನೆತನದವರ ಖಾಸಗಿ ಆಸ್ತಿ ಕೈತಪ್ಪಿ ಹೋಗುವ ಆತಂಕ
* ಪ್ರಾಧಿಕಾರ ರಚನೆಯಿಂದ ಅರಮನೆ ವಾರಸುದಾರರ ಅಧಿಕಾರ ಮೊಟಕು
• ಬೆಟ್ಟದ ಆಸ್ತಿ ವಿಚಾರ ನ್ಯಾಯಾಲಯದಲ್ಲಿರುವು ದರಿಂದ, ತೀರ್ಮಾನ ಆಗುವವರೆಗೆ ಕಾಯಬೇಕು
* ಪ್ರಾಧಿಕಾರದ ಮೂಲಕ ಎಲ್ಲ ನಿಯಂತ್ರಣವೂ ಸರ್ಕಾರದ್ದೇ ಆಗಿರುತ್ತದೆ
• ಬೆಟ್ಟದ ಸಂಪೂರ್ಣ ಸೌಕರ್ಯ, ನಿರ್ವಹಣೆ ಮೇಲೆ ಸರ್ಕಾರದ್ದೇ ಹಿಡಿತ
• ನೌಕರರು, ಅಧಿಕಾರಿಗಳು ಹಾಗೂ ಅರ್ಚಕರು ಸೇರಿ ಎಲ್ಲ ನೇಮಕಾತಿ ಅಧಿಕಾರವೂ ಸರ್ಕಾರದ್ದೇ
• ನಿಧಿ, ಸೇವಾ ಶುಲ್ಕ, ದೇಣಿಗೆ, ಕಾಣಿಕೆಯ ಬಳಕೆ ವಿಚಾರವೂ ಪ್ರಾಧಿಕಾರದ ಅಂದರೆ ಸರ್ಕಾರದ್ದೇ ಆಗಿರಲಿದೆ
• ಕಲ್ಪಿಸಬಹುದಾದ ಸೌಕರ್ಯಗಳ ಬಗ್ಗೆ ಸರ್ಕಾರವೇ ತೀರ್ಮಾನಿಸಲಿದೆ
