ಮುರ್ಷಿದಾಬಾದ್: ಬಾಬ್ರಿ ಮಸೀದಿ ಕೆಡವಿದ ದಿನ ಡಿ.6 ರಂದು ಪಶ್ಚಿಮ ಬಂಗಾಲದ ಮುರ್ಷಿದಾಬಾದ್‌ನಲ್ಲಿ ಬಾಬ್ರಿ ಮಸೀದಿ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡುವುದಾಗಿ ಟಿಎಂಸಿ ಶಾಸಕ ಹುಮಾಯೂನ್ ಕಬೀರ್ ಘೋಷಿಸಿದ್ದು, ಹೊಸ ಧಾರ್ಮಿಕ ವಿವಾದ ಹುಟ್ಟು ಹಾಕಿದೆ.
ರಾಮಮಂದಿರದ ಶಿಖರದ ಮೇಲೆ ನ.25ರಂದು ಧ್ವಜಾರೋಹಣಕ್ಕೆ ಸಿದ್ಧತೆ ನಡೆದಿರುವಂತೆಯೇ ಶಾಸಕ ನೀಡಿರುವ ಈ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಅಯೋಧ್ಯೆ ಜಗದ್ಗುರು ಪರಮಹಂಸ ಆಚಾರ್ ಇದನ್ನು ತೀವ್ರವಾಗಿ ಖಂಡಿಸಿದ್ದು, ಶಾಸಕ ಹುಮಾಯೂನ್ ತಲೆಗೆ ಬೇಡಿಕೆ ಇಟ್ಟಿದ್ದಾರೆ.
ಶಾಸಕನ ತಲೆಗೆ 1 ಕೋಟಿ: ಪರಮಹಂಸ
ಶಾಸಕ ಹುಮಾಯೂನ್ ರನ್ನು ಹತ್ಯೆಗೈದವರಿಗೆ 1 ಕೋಟಿ ರೂ. ಬಹುಮಾನ ನೀಡುವುದಾಗಿ ಅವರು ಪ್ರಕಟಿಸಿದ್ದಾರೆ. ಇನ್ನು ಭಾರತದ ಯಾವ ಮೂಲೆಯಲ್ಲೂ ಮತ್ತೊಂದು ಬಾಬರಿ ಮಸೀದಿ ನಿರ್ಮಿಸಲು ಜಗತ್ತಿನ ಯಾವ ಶಕ್ತಿಗೂ ಸಾಧ್ಯವಿಲ್ಲ ಎಂದು ರಾಮಜನ್ಮಭೂಮಿ ಟ್ರಸ್ಟ್ ಸದಸ್ಯ ರಾಮ್ ವಿಲಾಸ್ ವೇದಾಂತಿ ಹೇಳಿದ್ದಾರೆ. ವಿಶೇಷವೆಂದರೆ, ಮುಸ್ಲಿಂ ಮುಖಂಡರು ಶಾಸಕ ಹುಮಾಯೂನ್ ರವರ ಹೇಳಿಕೆಯನ್ನು ಖಂಡಿಸಿದ್ದಾರೆ. ಮಸೀದಿ, ಮಂದಿರಗಳು ರಾಜಕೀಯಕ್ಕೆ ಇರುವ ಸ್ಥಳಗಳಲ್ಲ ಎಂದು ಸ್ವತಃ ಅಯೋಧ್ಯೆ ಕೇಸಿನ ಅರ್ಜಿದಾರ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.
