Free bus: ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆ (Tamil Nadu Assembly Polls) ಹಿನ್ನೆಲೆ ಎಐಎಡಿಎಂಕೆ (AIDMK) ಪಕ್ಷವು ಮೊದಲ ಹಂತದ ಚುನಾವಣೆಗೆ ಬರಪೂರ ಕೊಡುಗೆಗಳನ್ನ ಘೋಷಣೆ ಮಾಡಿದೆ. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ (Edappadi K Palaniswami) ಅವರಿಂದು ಮೊದಲ ಹಂತದ ಚುನಾವಣಾ ಭರವಸೆಗಳನ್ನ ಘೋಷಿಸಿದ್ದಾರೆ.,
ಈ ಬಾರಿ ಎಐಡಿಎಂಕೆ ಅಧಿಕಾರಕ್ಕೆ ಬಂದರೆ, ಮಹಿಳೆಯರಿಗೆ ಮಾಸಿಕ 2 ಸಾವಿರ ರೂಪಾಯಿ, ಮಹಿಳೆಯರ ಜೊತೆ ಪುರುಷರಿಗೂ ಉಚಿತ ಬಸ್ (Free Bus) ಸೇವೆ ವಿಸ್ತರಣೆ ಮಾಡುವುದಾಗಿ ಘೋಷಿಸಿದ್ದಾರೆ. ಇದರೊಂದಿಗೆ ಪ್ರತಿಯೊಬ್ಬರಿಗೂ ಸೂರು ಕಲ್ಪಿಸುವ ಯೋಜನೆಯನ್ನ ಪ್ರಕಟಿಸಿದ್ದಾರೆ.
ಮುಂಬರುವ 17ನೇ ವಿಧಾನಸಭಾ ಚುನಾವಣೆಗೆ ಪಕ್ಷವು ಸಾಮಾಜಿಕ ನ್ಯಾಯದ ಪರವಾಗಿ ಹೋರಾಡಲಿದೆ. ಜನ ಕಲ್ಯಾಣದ ಏಕೈಕ ಉದ್ದೇಶದಿಂದ ಕಾರ್ಯನಿರ್ವಹಿಸುವ ಸಲುವಾಗಿ ಮೊದಲ ಹಂತದ ಚುನಾವಣಾ ಭರವಸೆಗಳನ್ನೂ ಈಗಲೇ ಪ್ರಕಟಿಸಲಾಗಿದೆ ಎಂದು ತಿಳಿಸಿದ್ದಾರೆ.
ಮೊದಲ ಹಂತದ ಚುನಾವಣೆಗೆ ಬಂಪರ್ ಕೊಡುಗೆ ಘೋಷಣೆ
1. ಮಹಿಳಾ ಕಲ್ಯಾಣ: (ಕುಲ ವಿಳಕ್ಕು ಯೋಜನೆ)
ಸಮಾಜದಲ್ಲಿ ಆರ್ಥಿಕ ಸಮತೋಲನ ಕಾಯ್ದುಕೊಳ್ಳಲು, ಎಲ್ಲಾ ಕುಟುಂಬ ಕಾರ್ಡ್ ಹೊಂದಿರುವವರಿಗೆ ಕುಲವಿಳಕ್ಕು ಯೋಜನೆಯ ಮೂಲಕ ಮಾಸಿಕ 2,000 ರೂ. ಆರ್ಥಿಕ ಸಹಾಯ ನೀಡಲಾಗುವುದು. ಈ ಹಣ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ.
2. ಪುರುಷರಿಗೂ ಫ್ರೀ ಬಸ್
ನಗರ ಬಸ್‌ಗಳಲ್ಲಿ ಪ್ರಯಾಣಿಸುವ ಪುರುಷರಿಗೂ ಉಚಿತ ಬಸ್ ಪ್ರಯಾಣ ಯೋಜನೆಯನ್ನ ವಿಸ್ತರಿಸಲಾಗುವುದು. ಜೊತೆಗೆ ಮಹಿಳೆಯರಿಗೆ ನೀಡಲಾಗುತ್ತಿರುವ ಉಚಿತ ಬಸ್ ಸೇವೆ ಮುಂದುವರಿಸಲಾಗುವುದು.
3. ಎಲ್ಲರಿಗೂ ಮನೆ (ಅಮ್ಮ ಇಲ್ಲಂ ಯೋಜನೆ)
ʻಅಮ್ಮ ಇಲ್ಲಂ ಯೋಜನೆʼ ಅಡಿಯಲ್ಲಿ ಸರ್ಕಾರವು ಗ್ರಾಮೀಣ ಪ್ರದೇಶಗಳಲ್ಲಿ ಸ್ವಂತ ಮನೆ ಇಲ್ಲದವರಿಗೆ ಭೂಮಿ ಖರೀದಿಸಿ ಮನೆ ನಿರ್ಮಿಸಿಕೊಡಲಿದೆ. ಅದೇ ರೀತಿ ನಗರ ಪ್ರದೇಶಗಳಲ್ಲಿ ಸೂರಿಲ್ಲದ ಪ್ರತಿಯೊಬ್ಬರಿಗೂ ಅಪಾರ್ಟ್ಮೆಂಟ್ ಮನೆಗಳನ್ನ ಉಚಿತವಾಗಿ ನಿರ್ಮಿಸಿಕೊಡಲಿದೆ.
4. ಯೋಜನೆ 150 ದಿನಗಳಿಗೆ ಹೆಚ್ಚಿಳ
100 ದಿನಗಳ ಉದ್ಯೋಗ ಯೋಜನೆಯನ್ನ 125 ದಿನಗಳಿಗೆ ಹೆಚ್ಚಿಸಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗಾಗಿ ಈ ಯೋಜನೆಯನ್ನ 150 ದಿನಗಳಿಗೆ ಹೆಚ್ಚಿಸುವುದಾಗಿ ಎಐಡಿಎಂಕೆ ಭರವಸೆ ನೀಡಿದೆ.
5. ಅಮ್ಮ ದ್ವಿಚಕ್ರ ವಾಹನ ವಿತರಣಾ ಯೋಜನೆ
ಒಟ್ಟು 5 ಲಕ್ಷ ಮಹಿಳೆಯರಿಗೆ ಅಮ್ಮ ದ್ವಿಚಕ್ರ ವಾಹನ ವಿತರಿಸುವ ಯೋಜನೆ ಹಾಕಿಕೊಂಡಿದೆ, ಜೊತೆಗೆ 25,000 ರೂ. ಸಹಾಯಧನ ನೀಡುವ ಯೋಜನೆಯನ್ನೂ ಹಾಕಿಕೊಂಡಿದೆ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ತಿಳಿಸಿದ್ದಾರೆ.
